ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಿರಲಿ: ಶಾಸಕ ಹಂಪಯ್ಯ ನಾಯಕ

KannadaprabhaNewsNetwork | Published : Jan 25, 2024 2:01 AM

ಸಾರಾಂಶ

ಗ್ರಾಪಂ ವ್ಯಾಪ್ತಿಯಲ್ಲಿನ ನೀರಿನ ತೊಂದರೆ ಬಗ್ಗೆ ಮಾಹಿತಿ ನೀಡಬೇಕು. ಮಾನ್ವಿಯಲ್ಲಿ ನಡೆದ ಕುಡಿಯುವ ನೀರಿನ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರು ತಾಕೀತು ನೀಡಿದರು.

ಕನ್ನಡಪ್ರಭ ವಾರ್ತೆ ಮಾನ್ವಿ

ತಾಲೂಕಿನ ನದಿ ಹಾಗೂ ಹಳ್ಳಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಜಿ.ಹಂಪಯ್ಯ ನಾಯಕ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ನಿರ್ವಹಣೆ ಕುರಿತು ನಡೆದ ಮಾನ್ವಿ, ಸಿರವಾರ ತಾಲೂಕುಗಳ ಅಧಿಕಾರಿಗಳ ಜೊತೆ ಬುಧವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ತುಂಗಭದ್ರ ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಕಾಲುವೆ ಮೂಲಕ ಅಗತ್ಯವಿದ್ದಾಗ ಮಾತ್ರ ಕುಡಿಯುವ ನೀರನ್ನು ಬಿಡಲಾಗುವುದು.

ಬೇಸಿಗೆಯಲ್ಲಿ ನೀರಿನ ತೀವ್ರವಾದ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಮಾಹಿತಿಯನ್ನು ತಾಲೂಕು ಆಡಳಿತಕ್ಕೆ ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಮೂಲಗಳನ್ನು ಗುರುತಿಸಿಕೊಳ್ಳಬೇಕು ಹಾಗೂ ಕೊಳವೆ ಬಾವಿಗಳ ದುರಸ್ತಿ, ಖಾಸಗಿಯವರ ಹಾಗೂ ರೈತರ ಕೊಳವೆ ಭಾವಿಗಳಿಂದ ನೀರನ್ನು ಪಡೆಯುವುದಕ್ಕೆ ಅವರಿಂದ ಒಪ್ಪಂದ ಮಾಡಿಕೊಂಡು ಪ್ರತಿ 15 ದಿನಗಳಿಗೊಮ್ಮೆ ಅವರಿಗೆ ಹಣವನ್ನು ಸಂದಾಯ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಮಾನ್ವಿ, ಸಿರವಾರ ತಾಲೂಕುಗಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೆರಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ ತೀವ್ರ ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾಪಂ ಇಒ ಖಲೀದ್ ಅಹಮ್ಮದ್ ಹಾಗೂ ಸಿರವಾರ ತಾಪಂ ಇಒ ಶಾರ್ಫುನಿಸಾ ಬೇಗಂ ಮಾತನಾಡಿದರು.

ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿ, ಸಿರವಾರ ತಹಸೀಲ್ದಾರ್ ರವಿ ಅಂಗಡಿ ಸೇರಿದಂತೆ ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿ-ಸಿಬ್ಬಂದಿ ಭಾಗವಹಿಸಿದರು.

Share this article