ಅಳ್ನಾವರ: ದುಡಿಯುವ ವರ್ಗದವರ ಹಿತ ಕಾಪಾಡಲು ಸರಕಾರ ಬದ್ದವಾಗಿದ್ದು, ಅವರದೇ ಆಗಿರುವ ಹಕ್ಕುಗಳನ್ನು ಕಾನೂನಾತ್ಮಕವಾಗಿ ಪಡೆದುಕೊಳ್ಳುವ ಮೂಲಕ ಸಾಮಾಜಿಕವಾಗಿ ಸಬಲರಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಅಳ್ನಾವರ ಪಟ್ಟಣದಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಿಸಿದ ವಸತಿ ಗೃಹಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ವಿವಿಧ ಇಲಾಖೆಗಳ ಪೈಕಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ೨೫ ವರ್ಗಗಳನ್ನು ಗುರುತಿಸಿ ಸವಲತ್ತುಗಳನ್ನು ಪಡೆದುಕೊಳ್ಳಲು ಆಡಳಿತ ವ್ಯವಸ್ಥೆ ಸರಳೀಕರಣಗೊಳಿಸಲಾಗಿದೆ.
ಸಕಾಲದಲ್ಲಿ ಕಾರ್ಮಿಕರಿಗೆ ಸೇವೆ ನೀಡುವಲ್ಲಿ ರಾಜ್ಯದಲ್ಲಿಯೇ ಕಾರ್ಮಿಕ ಇಲಾಖೆ ಮೊದಲ ಸ್ಥಾನಕ್ಕೆ ತರಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಟ್ಟುಕೊಂಡು ಅಳ್ನಾವರ ತಾಲೂಕಿನ ಆಡಳಿತ ಸೌಧವನ್ನು ಎಂಟೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣದ ಕಾರ್ಯ ಪ್ರಾರಂಭಿಸಲಾಗುವುದು. ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸುವುದು, ತಾಲೂಕು ಕ್ರೀಡಾಂಗಣ ಅಭಿವೃದ್ಧಿ, ಇನ್ನೀತರ ಅನೇಕ ಕೆಲಸಗಳನ್ನು ಹಂತ ಹಂತವಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ರೂಪಿಸಲು ಸಹಕಾರಿಯಾಗಿವೆ ಎಂದರು.ಸಾರ್ವಜನಿಕರು ಅರಣ್ಯ ಇಲಾಖೆಯ ಕೆಲಸಕ್ಕಾಗಿ ಹಳಿಯಾಳ-ಧಾರವಾಡಕ್ಕೆ ಅಲೆಯುವುದನ್ನು ತಪ್ಪಿಸಲು ಅಳ್ನಾವರ ತಾಲೂಕಿಗೆ ಪ್ರತ್ಯೇಕವಾದ ಅರಣ್ಯ ವಲಯ ಅಧಿಕಾರಿಯನ್ನು ನಿಯೋಜಿಸಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ವಲಯ ಕಚೇರಿ ಪ್ರಾರಂಭಗೊಳ್ಳಲಿದೆ. ಇದರಿಂದ ಸ್ಥಳೀಯ ಕಟ್ಟಿಗೆ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವರು ಹೇಳಿದರು.
ಮಹಾಂತೇಶ ಬೆಂತೂರ ಸ್ವಾಗತಿಸಿದರು. ನಾಗರಾಜ ಗುರ್ಲಹೊಸೂರ ವಂದಿಸಿದರು, ನಂತರ ಸಚಿವರು ಪೌರ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಿ ಇಲಾಖೆಯಿಂದ ದೊರೆಯುವ ಯೋಜನೆಗಳನ್ನು ಒದಗಿಸುವ ಭರವಸೆ ನೀಡಿದರು.
ಭೂಮಿಪೂಜೆತಾಲೂಕಿನ ಅರವಟಗಿ ಗ್ರಾಮದಲ್ಲಿ ನಿರ್ಮಿಸಲಾಗುವ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ನೇರವೇರಿಸಿದರು. ಗ್ರಾಪಂ ಅಧ್ಯಕ್ಷ ಅಶೊಕ ಜೋಡಟ್ಟಿ, ಮಲ್ಲಪ್ಪ ಗಾಣಿಗೇರ, ಉಮೇಶ ಬೂಮಣ್ಣವರ ಪಶು ಸಂಗೋಪನೆ ಇಲಾಖೆಯ ಡಾ. ಸುನೀಲ ಬನ್ನಿಗೋಳ, ಡಾ. ಪೋಳ ಇದ್ದರು