ಧರ್ಮ ಕಾಲಂನಲ್ಲಿ ಏನೆಂದು ಬರೆಸುತ್ತಾರೆ ಎಂಬುದು ಎಂಬುದು ಯಡಿಯೂರಪ್ಪ ಸ್ಪಷ್ಟಪಡಿಸಲಿ

KannadaprabhaNewsNetwork | Updated : Dec 26 2023, 01:33 AM IST

ಸಾರಾಂಶ

ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ, ಹಿಂದೂ ಧರ್ಮ ಎಂಬ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಈ ಮಧ್ಯೆ ಧರ್ಮದ ಕಾಲಂನಲ್ಲಿ ವೀರಶೈವ- ಲಿಂಗಾಯಿತ ಎಂದು ಬರೆಯಿಸುವ ಬಗ್ಗೆ ಮತ್ತು ಜಾತಿಗಣತಿ ನಡೆಸಬೇಕೆಂಬ ನಿರ್ಣಯಕ್ಕೆ ಬದ್ಧರಾಗಿದ್ದೀರಾ? ಎಂಬುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಬೇಕು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಧರ್ಮದ ಕಾಲಂನಲ್ಲಿ ವೀರಶೈವ- ಲಿಂಗಾಯಿತ ಎಂದು ಬರೆಯಿಸುವ ಬಗ್ಗೆ ಮತ್ತು ಜಾತಿಗಣತಿ ನಡೆಸಬೇಕೆಂಬ ನಿರ್ಣಯಕ್ಕೆ ಬದ್ಧರಾಗಿದ್ದೀರಾ? ಎಂಬುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಬೇಕು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಅಧಿವೇಶನದಲ್ಲಿ ಕೈಗೊಂಡಿರುವ ಹೊಸದಾಗಿ ಜಾತಿಗಣತಿ ಮಾಡಬೇಕು ಮತ್ತು ಜಾತಿಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ- ಲಿಂಗಾಯಿತ ಧರ್ಮವೆಂದೂ ಮತ್ತು ಜಾತಿ ಕಾಲಂನಲ್ಲಿ ಒಳಪಂಡಗಳನ್ನು ಬರೆಸಬೇಕೆಂಬ ಮಹತ್ವದ ನಿರ್ಣಯಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವೀರಶೈವ - ಲಿಂಗಾಯಿತ ಸಮಾಜದ ಬಿಜೆಪಿ ನಾಯಕರು ತಮ್ಮ ಬದ್ಧತೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಬಿಎಸ್‌ವೈ ಸ್ಪಷ್ಟಪಡಿಸಬೇಕು:

ವೀರಶೈವ- ಲಿಂಗಾಯಿತ ಪ್ರತ್ಯೇಕ ಧರ್ಮ ಎಂಬ 30 ವರ್ಷಗಳ ಹಳೆಯ ಬೇಡಿಕೆಯನ್ನು ಅಖಿಲಭಾರತ ವೀರಶೈವ-ಲಿಂಗಾಯಿತ ಅಧಿವೇಶನದಲ್ಲಿ ಮಂಡಿಸಿ ಜಾತಿಗಣತಿ ಸಂದರ್ಭದಲ್ಲಿ ಧರ್ಮದ ಕಾಲಂ ’ವೀರಶೈವ-ಲಿಂಗಾಯಿತ’ ಎಂದು ಮತ್ತು ಜಾತಿ ಕಾಲಂನಲ್ಲಿ ಒಳಪಂಗಡಗಳನ್ನು ಬರೆಯಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯದ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪಾತ್ರವೂ ಇದ್ದರೂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಈ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಗಟ್ಟಿಯಾಗಿ ಹೇಳಿಲ್ಲ. ಯಡಿಯೂರಪ್ಪ ಅವರ ಪುತ್ರರಾದ ವಿಜಯೇಂದ್ರ, ರಾಘವೇಂದ್ರ ಸೇರಿದಂತೆ ವೀರಶೈವ-ಲಿಂಗಾಯಿತ ಸಮಾಜಕ್ಕೆ ಸೇರಿದ ಬಿಜೆಪಿ ನಾಯಕರು ಧರ್ಮದ ಕಾಲಂನಲ್ಲಿ ವೀರಶೈವ-ಲಿಂಗಾಯಿತ ಎಂದು ಬರೆಸುತ್ತೀರೋ, ಹಿಂದೂ ಎಂದು ಬರೆಸುತ್ತಿರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಯಡಿಯೂರಪ್ಪನವರು ನನ್ನ ರಾಜಕೀಯ ನಾಯಕರು ಹೌದು, ಸಮಾಜದ ನಾಯಕರೂ ಹೌದು. ಅವರು ಇಡುವ ಹೆಜ್ಜೆಗಳನ್ನು ಸಮಾಜ ನೋಡುತ್ತಿದೆ. ಸಮಾಜದ ಸಮಾವೇಶಗಳಲ್ಲಿ ಬಂದು ವೀರಶೈವ- ಲಿಂಗಾಯಿತ ಬೇರೆ ಧರ್ಮ ಅನ್ನೋದು, ಬಿಜೆಪಿ ಸಮಾವೇಶದಲ್ಲಿ ನಾವೆಲ್ಲಾ ಹಿಂದೂ ಎಂದು ಹೇಳೋದು ಈ ಧ್ವಂಧ್ವದ ನಿಲುವುಗಳಿಂದ ನಾಯಕರಾದವರೂ ಹೊರಗೆ ಬರಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪನವರು ಜನಗಣತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷದೊಳಗೆ ಜನಗಣತಿಗೆ ವಿರೋಧವಿದೆ. ಮೋದಿ ಅವರಲ್ಲಿ ಜನಗಣತಿಗೆ ಒಲವಿಲ್ಲ, ನೀವು ಒಲವು ವ್ಯಕ್ತಪಡಿಸುತ್ತಿದ್ದೀರಾ, ಸಮಾಜದ ಸಮಾವೇಶದಲ್ಲಿ ಬಂದು ವೀರಶೈವ ಲಿಂಗಾಯಿತ ಎಂದು ಹೇಳುತ್ತೀರಾ, ಬಿಜೆಪಿಯ ವೇದಿಕೆಗಳಲ್ಲಿ ಹಿಂದೂ ಎಂದು ಬರೆಯಿಸಿ ಎನ್ನುತ್ತೀರಾ, ನೀವು ಗೊಂದಲದಲ್ಲಿದ್ದೀರೋ ಅಥವಾ ಸಮಾಜವನ್ನು ಗೊಂದಲಕ್ಕೀಡು ಮಾಡಲು ಹೊರಟಿದ್ದೀರೋ? ಇಡೀ ಸಮಾಜ ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ವಾಮೀಜಿಗಳ ಸಮ್ಮುಖದಲ್ಲಿ ಕೈಗೊಂಡ ಈ ನಿರ್ಣಯಕ್ಕೆ ತಾವು ಬದ್ಧರಾಗಿ ನಡೆದುಕೊಳ್ಳುತ್ತೀರೊ ಎಂದು ಪ್ರಶ್ನಿಸಿದರು.

ಕೇವಲ ಮತಗಳಿಕೆಗಾಗಿ ಬಿಜೆಪಿ ವೇದಿಕೆಯಲ್ಲೊಂದು ಮಾತು, ಸಮಾಜದ ವೇದಿಕೆಯಲ್ಲೊಂದು ಮಾತಾನಾಡಿ ಹಿಂದೂಗಳನ್ನು ಮತ್ತು ವೀರಶೈವ -ಲಿಂಗಾಯಿತ ಸಮಾಜವನ್ನು ಧ್ವಂದ್ವಕ್ಕೆ ತಳ್ಳಬೇಡಿ ಎಂದು ಕಿಡಿ ಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಧೀರರಾಜ್ ಹೊನ್ನವಿಲೆ, ವೈ.ಎಚ್. ನಾಗರಾಜ್, ಹಿರಣಯ್ಯ, ವಾಹಿದ್ ಅಡ್ಡು ಮತ್ತಿತರರು ಇದ್ದರು.

- - - -25ಎಸ್‌ಎಂಜಿಕೆಪಿ03: ಆಯನೂರು ಮಂಜುನಾಥ್‌

Share this article