ಶಿರಸಿ: ಹಿರಿಯ ಪತ್ರಕರ್ತರು, ಈ ರಂಗದಿಂದ ನಿವೃತ್ತರಾದವರಿಂದ ಇಂದಿನ ಪತ್ರಕರ್ತರು ಕಲಿಯುವ ಅಂಶಗಳು ಜಾಸ್ತಿ ಇವೆ. ಹಿರಿಯರನ್ನು ಪ್ರೇರಣೆಯಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಗರದ ಟಿಆರ್‌ಸಿ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಎಲ್ಲ ವ್ಯಕ್ತಿಗಳಂತೆ ರಾಜಕಾರಣಿಗಳಾದ ನಮ್ಮಿಂದಲೂ ಲೋಪ-ದೋಷಗಳು ಸಂಭವಿಸುತ್ತವೆ. ಆಗ ಬೇಕಾದ ಕೆಲಸವನ್ನು ಪತ್ರಕರ್ತರು ತಮ್ಮ ಲೇಖನಿ ಮೂಲಕ ನಮ್ಮ ಗಮನಕ್ಕೆ ತಂದು ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಆದರೆ, ಉತ್ತರ ಕನ್ನಡದ ಪತ್ರಕರ್ತರ ಕಾರ್ಯ ವಿಧಾನ ಪ್ರಶಂಸನಾರ್ಹ. ಆಯಾ ಸಂದರ್ಭಕ್ಕೆ ಸರಿಯಾಗಿ ಹೇಳಿ, ಅಲ್ಲಿಗೇ ಬಿಡುವ ವ್ಯವಸ್ಥೆಯನ್ನು ನಮ್ಮ ಪತ್ರಕರ್ತರು ಅಳವಡಿಸಿಕೊಂಡಿದ್ದಾರೆ. ನಾವು ನಮ್ಮಿಂದಾದ ಲೋಪ ಸರಿಪಡಿಸಿಕೊಂಡ ಬಳಿಕ ಪತ್ರಕರ್ತರೇ ನಮಗೆ ಶುಭಕೋರುವ ವ್ಯವಸ್ಥೆ ನಮ್ಮ ಜಿಲ್ಲೆಯಲ್ಲಿದೆ ಎಂದರು.
ಮಾಧ್ಯಮಶ್ರೀ ಪ್ರಶಸ್ತಿ ಸ್ವೀಕರಿಸಿ ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಮಾತನಾಡಿ, ಮಹಿಳೆಯಾಗಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಬೇಕೆಂದರೆ ಗಟ್ಟಿತನದ ಅಗತ್ಯತೆ ಇದೆ. ಪ್ರಚಾರದ ಜೊತೆಗೆ ಅಪಪ್ರಚಾರವನ್ನೂ ಆಕೆ ಎದುರಿಸಬೇಕಾಗುತ್ತದೆ. ಆದರೆ, ಅಪಪ್ರಚಾರಗಳಿಗೆ ಎದೆಗುಂದದೇ ನಮ್ಮ ಕಾರ್ಯವನ್ನು ಪ್ರಮಾಣಿಕವಾಗಿ ಮಾಡಿದಾಗ ಜನತೆಯೇ ನಮ್ಮನ್ನು ಗುರುತಿಸುತ್ತಾರೆ ಎಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಪತ್ರಿಕೋದ್ಯಮ ಇಂದು ಸಂಕಟದಲ್ಲಿದೆ. ಎಷ್ಟೇ ನೂತನ ವಿನ್ಯಾಸ ಮಾಡಿದರೂ ಜನ ಒಪ್ಪುತ್ತಿಲ್ಲ. ಜನಕ್ಕೆ ಬೇಕಾದುದನ್ಬು ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೋ ಎನಿಸುತ್ತಿದೆ. ಕೆಲವೊಮ್ಮೆ ಸೋಲು ಪತ್ರಿಕೆಯೊಂದನ್ನು ಮಯಳುಗಿಸುವ ಹಂತಕ್ಕೂ ತರುತ್ತದೆ. ಪತ್ರಿಕೆ ಉಳಿಯಬೇಕೆಂದರೆ ಜನ ಒಪ್ಪುವ ಮಾದರಿಯಲ್ಲಿ ವಿಶೇಷ ವರದಿಗಳನ್ನು ನೀಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿರುವ ನಮ್ಮನ್ನು ಎಚ್ಚರಿಸುವ ಕೆಲಸವನ್ನು ಶಿರಸಿ ಮಾಧ್ಯಮಗಳು ಮಾಡುತ್ತಿವೆ. ಪ್ರಾಮಾಣಿಕ ವರದಿಗಳ ಮೂಲಕ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ತಿಳಿಸುತ್ತಿದ್ದಾರೆ ಎಂದರು.ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಪ್ರಾಸ್ತಾವಿಕ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಸಂಘ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಈಗ ಸ್ವಂತ ಕಚೇರಿಯನ್ನೂ ಹೊಂದಿ, ತಾಲೂಕಿನ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಖಜಾಂಚಿ ಮಹಾದೇವ ನಾಯ್ಕ ಇದ್ದರು. ಚಿನ್ಮಯ ಕೆರೆಗದ್ದೆ ಪ್ರಾರ್ಥನಾ ಗೀತೆ ಹಾಡಿದರು. ನರಸಿಂಹ ಅಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.ಶಿರಸಿ ತಾಲೂಕು ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ₹೫ ಲಕ್ಷ ಸಹಾಯಧನ ನೀಡಲಿದ್ದೇನೆ. ಇದನ್ನು ಪತ್ರಕರ್ತರ ಆರೋಗ್ಯಕ್ಕಾಗಿ, ಬಡ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಳ್ಳಿ.ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ
ನಾಲ್ವರು ಸಾಧಕರಿಗೆ ಪುರಸ್ಕಾರತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಗೋಲ್ಡನ್ ಪೆನ್ ಪುರಸ್ಕಾರವನ್ನು ಯುವ ಪತ್ರಕರ್ತ ಮಂಜುನಾಥ ಈರಗೊಪ್ಪ ಅವರಿಗೆ ನೀಡಿ ಪುರಸ್ಕರಿಸಲಾಯಿತು. ದತ್ತಿನಿಧಿ ಪುರಸ್ಕಾರಗಳಾದ ದಿ.ಮತ್ತಿಗಾರ ಸುಬ್ಬಣ್ಣ ದತ್ತಿನಿಧಿಯನ್ನು ಪತ್ರಕರ್ತ ಮಧುಸೂದನ ಹೆಗಡೆ ಅವರಿಗೆ, ದಿ.ಲಕ್ಷ್ಮೀ ಗೋಪಾಲಕೃಷ್ಣ ಭಟ್ ಬಿಸ್ಲಕೊಪ್ಪ ದತ್ತಿನಿಧಿ ಪುರಸ್ಕಾರವನ್ನು ಪತ್ರಿಕಾ ವಿತರಕ ಗಣೇಶ ನೀಲೇಕಣಿ ಅವರಿಗೆ ಹಾಗೂ ಗ್ರಾಮೀಣ ಅತ್ಯುತ್ತಮ ಪತ್ರಕರ್ತರಿಗೆ ನೀಡಲಾಗುವ ಕಬ್ನಳ್ಳಿ ದಿ. ಸರೋಜಾ ಮತ್ತು ಛತ್ರಪತಿ ಹೆಗಡೆ ಪುರಸ್ಕಾರವನ್ನು ಬನವಾಸಿಯ ವರದಿಗಾರ ಸುಧೀರ ನಾಯರ್ ಅವರಿಗೆ ನೀಡಿ ಪುರಸ್ಕರಿಸಲಾಯಿತು.