ಯುವ ಬರಹಗಾರರು ಹೆಚ್ಚು ಓದಲಿ: ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ

KannadaprabhaNewsNetwork |  
Published : Jun 25, 2024, 12:39 AM IST
ಹುಬ್ಬಳ್ಳಿಯ ಕಿಮ್ಸ್‌ನ ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ ಭಾನುವಾರ ನಡೆದ ಡಾ. ಪ್ರಹ್ಲಾದ ಅಗಸನಕಟ್ಟೆ ಕಥಾ ಬಹುಮಾನ ಪ್ರದಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಬರವಣಿಗೆಕಾರರಿಗೂ ಮತ್ತು ಓದುಗರಿಗೂ ಇಂದು ಸಂಪರ್ಕ ಸಂವಹನ ಇಲ್ಲದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಮೋಜಿಯಂತಹ ಚಿತ್ರಗಳು ಬಂದು ಭಾಷೆಯಿಂದ ನಾವು ದೂರ ಉಳಿಯುವಂತಾಗುತ್ತಿದೆ.

ಹುಬ್ಬಳ್ಳಿ:

ಸಾಮಾಜಿಕ ಜಾಲತಾಣದಿಂದ ಓದುವ ಕಾಲ ದೂರಾಗಿದೆ. ಯುವ ಬರಹಗಾರರು ಇಂದು ಕೇಳುವ ಸ್ಥಿತಿಯಲ್ಲಿಲ್ಲ, ಮಾರ್ಗದರ್ಶನ ಮಾಡುವ ಹಿರಿಯರು ಇಲ್ಲದಂತಾಗಿದೆ ಎಂದು ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಅವರು ಇಲ್ಲಿನ ಕಿಮ್ಸ್‌ನಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಹಾಗೂ ಕಿಮ್ಸ್ ವತಿಯಿಂದ ಆಯೋಜಿಸಿದ್ದ ಡಾ. ಪ್ರಹ್ಲಾದ ಅಗಸನಕಟ್ಟೆ ಕಥಾ ಬಹುಮಾನ ಪ್ರದಾನ ಸಮಾರಂಭದಲ್ಲಿ ಯುವ ಬರಹಗಾರ ಸಂಜಯ್ ಚಿತ್ರದುರ್ಗ ಅವರ ದ್ಯಾಮಜ್ಜಿ ಪುರಾಣ ಕಥೆಗೆ ಬಹುಮಾನ ವಿತರಿಸಿ ಮಾತನಾಡಿದರು.

ಬರವಣಿಗೆಕಾರರಿಗೂ ಮತ್ತು ಓದುಗರಿಗೂ ಇಂದು ಸಂಪರ್ಕ ಸಂವಹನ ಇಲ್ಲದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಮೋಜಿಯಂತಹ ಚಿತ್ರಗಳು ಬಂದು ಭಾಷೆಯಿಂದ ನಾವು ದೂರ ಉಳಿಯುವಂತಾಗುತ್ತಿದೆ. ಇದರಿಂದ ಕನ್ನಡ ಭಾಷೆ, ಬರಹಗಾರರಿಗೆ ತೊಂದರೆಯಾಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಆರ್ಥೈಸಿಕೊಳ್ಳಬೇಕಿದೆ. ಇನ್ನು ಮುಂದಾದರೂ ಯುವ ಬರಹಗಾರರು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಕರೆ ನೀಡಿದರು.

ಡಾ. ಪ್ರಹ್ಲಾದ ಅಗಸನಕಟ್ಟೆ ನಮ್ಮ ಮನೆಯವರೊಂದಿಗೆ ಆಪ್ತರಾಗಿದ್ದರು. ಸರಳವಾಗಿದ್ದರೂ ವೈಚಾರಿಕತೆಯಿಂದ ಗಟ್ಟಿಯಾಗಿದ್ದರು. ಅವರ ಬರವಣಿಗೆಯಲ್ಲಿ ತಾತ್ವಿಕತೆ, ಸಮಾಜ ಕಟ್ಟುವಿಕೆ ನೆಲೆಯೂರಿತ್ತು. ಅಗಸನಕಟ್ಟೆ ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಸಂಶೋಧನಾ ಕೃತಿ ಓದಬೇಕು ಎಂದರು.

ಲೇಖಕ ಲಿಂಗರಾಜ ಸೊಟ್ಟಪ್ಪನವರ, ಭಾಗ್ಯಜ್ಯೋತಿ ಹಿರೇಮಠ ಅವರು ಸಂಜಯ್ ಚಿತ್ರದುರ್ಗ ಅವರ ದ್ಯಾಮಜ್ಜಿ ಪುರಾಣದ ಕಥೆ ಕುರಿತು ಮಾತನಾಡಿದರು.

ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಕನ್ನಡ ಕಾರ್ಯಕ್ರಮಗಳು ನಮ್ಮ ಸಂಸ್ಥೆಯಲ್ಲಿ ಹೆಚ್ಚಾಗಲಿ. ವಿದ್ಯಾರ್ಥಿಗಳಿಗೂ ಕನ್ನಡದ ಅರಿವು ಮೂಡುವಂತಾಗಲಿ ಎಂದರು.

ಡಾ. ಪ್ರಹ್ಲಾದ ಅಗಸನಕಟ್ಟೆ ಕಥಾ ಬಹುಮಾನ ವಿಜೇತ ಕಥೆಗಾರ ಸಂಜಯ ಚಿತ್ರದುರ್ಗ ಮಾತನಾಡಿ, ಹೊಸ ತಲೆಮಾರಿನ ಯುವ ಬರಹಗಾರರು ಓದುತ್ತಿದ್ದಾರೆ. ಆದರೆ, ಹಿರಿಯ ಮಾರ್ಗದರ್ಶನ ಸರಿಯಾಗಿ ಸಿಗುತ್ತಿಲ್ಲ. ದ್ಯಾಮಜ್ಜಿಯ ಪುರಾಣ ಕಥೆ ನಾನು ನೋಡಿದ, ಅನುಭವದ ಕಥೆಯಾಗಿದೆ. ಈ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ ಎಂದರು.

ಕವಿ ಮಹಾಂತಪ್ಪ ನಂದೂರ ಡಾ. ಪ್ರಹ್ಲಾದ ಅವರ ಕಾವ್ಯ ಕುರಿತು ಮಾತನಾಡಿದರು. ವಿಜಯಾ ಅಗಸನಕಟ್ಟೆ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ಅಡ್ನೂರ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ಸಾಹಿತ್ಯ ವೇದಿಕೆಯ ಪ್ರಮುಖರಾದ ಸುನಂದಾ ಕಡಮೆ, ಡಾ. ಸಿದ್ದೇಶ್ವರ ಕಟಕೋಳ, ಡಾ. ಬಸು ಬೇವಿನಗಿಡದ, ಚನ್ನಪ್ಪ ಅಂಗಡಿ ಸೇರಿದಂತೆ ಹಲವರಿದ್ದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ