ಎಲ್ಲರೂ ಬಹುತ್ವ ಗೌರವಿಸೋಣ: ಡಾ.ರಹಮತ್ ತರೀಕೆರೆ

KannadaprabhaNewsNetwork |  
Published : Mar 07, 2025, 12:49 AM IST
6ಎಚ್‌ಪಿಟಿ3ಹಂಪಿ ಕನ್ನಡ ವಿವಿಯಲ್ಲಿ ನಡೆದ ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟವನ್ನು ಚಿಂತಕ ಡಾ. ರಹಮತ್ ತರೀಕೆರೆ ಅವರು ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು. ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ, ಅಧ್ಯಯನ ಪೀಠದ ಸಂಚಾಲಕ ಡಾ. ಎಫ್.ಟಿ. ಹಳ್ಳಿಕೇರಿ ಇದ್ದರು. | Kannada Prabha

ಸಾರಾಂಶ

ಭಾರತವು ಬಹುತ್ವಗಳ ರಾಷ್ಟ್ರವಾಗಿದ್ದು, ಬಹುತ್ವವನ್ನು ಗೌರವಿಸಿದರೆ ಭಾರತ ಬದುಕುತ್ತದೆ. ಇಲ್ಲವಾದರೆ ನೆಮ್ಮದಿ ಇಲ್ಲವಾಗುತ್ತದೆ.

ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಭಾರತವು ಬಹುತ್ವಗಳ ರಾಷ್ಟ್ರವಾಗಿದ್ದು, ಬಹುತ್ವವನ್ನು ಗೌರವಿಸಿದರೆ ಭಾರತ ಬದುಕುತ್ತದೆ. ಇಲ್ಲವಾದರೆ ನೆಮ್ಮದಿ ಇಲ್ಲವಾಗುತ್ತದೆ ಎಂದು ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಹಾಲುಮತ ಅಧ್ಯಯನ ಪೀಠ ವತಿಯಿಂದ ಹಮ್ಮಿಕೊಂಡಿದ್ದ ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತ ಎಂದರೆ ಲೋಕ ದೃಷ್ಟಿ ತತ್ವಶಾಸ್ತ್ರ ಎಂದು ಅರ್ಥವಾಗುತ್ತದೆ. ಕರ್ನಾಟಕದ ಎಷ್ಟೋ ಸಮುದಾಯಗಳಿಗೆ ಅವುಗಳನ್ನು ಅರಿಯುವ ಕೆಲಸ ಇನ್ನೂ ಆಗಿಲ್ಲ. ಪ್ರತಿಯೊಂದು ಜಾತಿ ಒಳಗೆ ಮತ್ತೊಂದು ಪಂಗಡ ಇದೆ. ಸಮೃದ್ಧಿಯನ್ನು ಉತ್ತೇಜಿಸುವುದು ಹಾಲುಮತ, ಪಶುಗಾಯಿ ಪಂಥಗಳ ಮೇಲೆ ಅಧ್ಯಯನಗಳು ನಡೆಯಬೇಕು ಎಂದರು.

ಇನ್ನೂ ಪಶುಪಾಲನೆ ಮಾಡುವವರು ಶ್ರೇಷ್ಠ ಎಂದರೆ, ಹಂದಿ, ಕುದುರೆ, ಕತ್ತೆ ಇವುಗಳನ್ನು ಸಾಕುವವರನ್ನು ಏಕೆ ಇದರಿಂದ ಹೊರಗಡೆ ಇಟ್ಟಿದ್ದೀವಿ ಒಮ್ಮೆ ಆಲೋಚನೆ ಮಾಡಬೇಕು.

ಪ್ರಮುಖವಾಗಿ ಸಮುದಾಯಗಳ ಅಧ್ಯಯನ ವರ್ತಮಾನಗಳಿಂದ ಕೂಡಿರಬೇಕು. ಪ್ರಾದೇಶಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಬಹುಮುಖ್ಯವಾಗಿ ದಲಿತ ಎಂಬ ಪದ ರಾಜಕೀಯ, ಸಾಮಾಜಿಕವಾಗಿ ಬಳಕೆಯಲ್ಲಿರುವುದರಿಂದ ಪರಿಚಿತವಾಗಿದ್ದು, ಭಾರತದಲ್ಲಿ ಪದರ ರೂಪದಲ್ಲಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ದ್ವೇಷವನ್ನು ಕಾಣಬಹುದು. ಅದರಲ್ಲೂ ಮುಸ್ಲಿಮರಲ್ಲಿಯೂ ಅಸ್ಪೃಶ್ಯತೆ ಇದ್ದು, ಇದು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಇಂತಹ ಸಮುದಾಯಗಳ ಮೂಲ ನೆಲೆಯಲ್ಲಿ ಹರಿಯಬೇಕಾದರೆ ಏಕರೂಪಿ ಪರಿಭಾಷೆಯನ್ನು ತ್ಯಜಿಸಬೇಕು, ಹಾಗೆಯೇ ಜಾತಿ ಸಮೂಹದ ಕಲ್ಪನೆಯಿಂದ ಹೊರಬಂದು ಸಂಶೋಧನೆ ನಡೆಯಬೇಕು ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹಾಲುಮತ ಸಂಸ್ಕೃತಿ ಬಹಳ ವಿಶಾಲವಾದ ಅರ್ಥದಲ್ಲಿ ಬಳಕೆಯಲ್ಲಿರುವ ಸಂಸ್ಕೃತಿ, ಅನೇಕ ಆಚರಣೆಗಳು ಈ ಸಂಸ್ಕೃತಿಯಲ್ಲಿ ಒಳಗಾಗಿವೆ. ಇಂದು ಅನೇಕ ಕಾರಣಗಳಿಗಾಗಿ ಅನಾದಿ ಕಾಲದಲ್ಲಿ ಇದ್ದಂತಹ ಆಚರಣೆ ಮತ್ತು ಸಂಪ್ರದಾಯಗಳು ಅನ್ಯಸಂಸ್ಕೃತಿಗೆ ಪ್ರಭಾವಕ್ಕೆ ಒಳಗಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಮೂಲ ಆಚರಣೆಗಳ ಲಕ್ಷಣಗಳು ಮರೆಯಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಇಂತಹ ಅಧ್ಯಯನ ಕಮ್ಮಟಗಳ ಮೂಲಕ ಅಂತಹ ಅಳಿವಿನ ಅಂಚಿನಲ್ಲಿರುವ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದರು.

ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ