ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಶ್ರಮಿಸೋಣ

KannadaprabhaNewsNetwork |  
Published : Jun 13, 2024, 12:48 AM IST
೧೨ಎಚ್‌ವಿಆರ್೨, ೨ಎ | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಒಬ್ಬರೂ ಬಾಲ ಕಾರ್ಮಿಕರು ಇರಬಾರದು ಎಂಬುದು ಜಿಲ್ಲಾಡಳಿತದ ಕಾಳಜಿಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಶ್ರಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.

ಹಾವೇರಿ: ಜಿಲ್ಲೆಯಲ್ಲಿ ಒಬ್ಬರೂ ಬಾಲ ಕಾರ್ಮಿಕರು ಇರಬಾರದು ಎಂಬುದು ಜಿಲ್ಲಾಡಳಿತದ ಕಾಳಜಿಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಶ್ರಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.ಇಲ್ಲಿಯ ನಾಗೇಂದ್ರನಮಟ್ಟಿ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.ಇಂದಿನ ಮಕ್ಕಳು ಸಮಾಜದ ಬೆನ್ನೆಲುಬು, ಸಮಾಜ ಕಟ್ಟುವವರು ಹಾಗೂ ಸಮಾಜ ಮುನ್ನಡೆಸುವವರು. ಪ್ರತಿಯೊಬ್ಬರೂ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಬೇಕು. ಮಕ್ಕಳು ಹಕ್ಕುಗಳ ಮತ್ತು ಕಾಯ್ದೆ ಬಗ್ಗೆ ಅರಿವು ಹೊಂದಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕೈಗಾರಿಕೆಗಳು, ಹೋಟೆಲ್, ಕಾರ್ಖಾನೆಗಳು ಇತರೆ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ಗೆ ಕರೆಮಾಡಿ ಅಂತಹ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಬೇಕು. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಹಾಗೂ ಶಿಕ್ಷೆ ಮತ್ತು ದಂಡದ ಬಗ್ಗೆ ಈಗ ಸಾಕಷ್ಟು ಅರಿವು ಬಂದಿದೆ. ಹಾಗಾಗಿ ಬಾಲ ಕಾರ್ಮಿಕರು ಕಂಡುಬರುತ್ತಿಲ್ಲ ಎಂದರು.ಶಾಲೆಯ ರಜೆ ಸಮಯದಲ್ಲಿ ಮಕ್ಕಳು ಕೂಲಿ ಹಾಗೂ ಸಂಬಳಕ್ಕೆ ಕೆಲಸಮಾಡದೇ ತಮ್ಮ ಮನೆಯ ಕೆಲಸಗಳನ್ನು ಮಾಡಬೇಕು. ಪಾಲಕರಿಗೆ ಸಹಾಯಮಾಡಬೇಕು, ವಿದ್ಯಾಭ್ಯಾಸದ ಜೊತೆಗೆ ದೈಹಿಕ ಕಸರತ್ತು ಮಾಡಿದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಹಾಗಾಗಿ ಮನೆಯಲ್ಲಿ ಕೆಲಸ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಮಾತನಾಡಿ, ಇಂದಿನ ಮಕ್ಕಳು ಇಂದಿನ ಪ್ರಜೆಗಳು, ದೇಶದಲ್ಲಿ ಶೇ.೪೦ರಷ್ಟು ಮಕ್ಕಳಿದ್ದಾರೆ. ೧೮ ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. ೧೮ ವರ್ಷದೊಳಗಿನ ಮಕ್ಕಳು ಶಾಲೆಯಲ್ಲಿರಬೇಕು. ಮಕ್ಕಳಿಗೆ ಬದುಕುವ, ರಕ್ಷಣೆ, ಭಾಗವಹಿಸುವಿಕೆ ಹಾಗೂ ವಿಕಾಸದ ಹಕ್ಕು ನೀಡಲಾಗಿದೆ. ಮಕ್ಕಳಿಗೆ ಎಲ್ಲ ಹಕ್ಕುಗಳು ದೊರೆತಾಗ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದರು.ಮಕ್ಕಳ ಸಹಾಯವಾಣಿ ೧೦೯೮ ದಿನದ ೨೪ ಗಂಟೆಯು ಕಾರ್ಯನಿರ್ವಹಿಸುತ್ತದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ, ಕಾಣೆಯಾದ ಹಾಗೂ ಶಾಲೆಯಿಂದ ಹೊರಗಳಿದ ಮಕ್ಕಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆಮಾಡಿದಲ್ಲಿ ಅಂತಹ ಮಕ್ಕಳ ಸಮಸ್ಯೆ ಪರಿಹರಿಸಲಾಗುವುದು ಹಾಗೂ ಪುನರ್ವಸತಿ ಕಲ್ಪಿಸಲಾಗುವುದು. ಮಕ್ಕಳ ತೆರೆದ ತಂಗುದಾಣ, ಸ್ಪಂದನ ದತ್ತು ಕೇಂದ್ರ, ನಿರ್ಗತಿಕ ಮಕ್ಕಳ ಕುಟೀರಗಳನ್ನು ಮಕ್ಕಳ ಪುನರ್ವಸತಿಗೆ ಸ್ಥಾಪಿಸಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಸಹಾಯ ಕಾನೂನು ನೆರವು ಅಭಿರಕ್ಷಕ ಎನ್.ಎನ್. ದಿಳ್ಳೆಪ್ಪನವರ ಅವರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೮೬ ಹಾಗೂ ತಿದ್ದುಪಡಿ ಕಾಯ್ದೆ ೨೦೧೬ರ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಕರ್ತವ್ಯಗಳ ಕುರಿತು ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಲಕ್ಷ್ಮಣ ಕುಳಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸ್‌ಐ ಜಗದೀಶ ಉಪಸ್ಥಿತರಿದ್ದರು. ದೀಪಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರ ವಂದಿಸಿದರು.ಕಾರ್ಯಕ್ರಮಕ್ಕೂ ಮೊದಲು ನಾಗೇಂದ್ರನಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೮ರ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಬಾಲಮುಕುಂದ ರಮೇಶರಾವ ಮುತಾಲಿಕ ದೇಸಾಯಿ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ, ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಲಕ್ಷ್ಮಣ ಕುಳಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಪಿಎಸ್‌ಐ ಮೋತಿಲಾಲ ಪವಾರ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ