ಶರಾವತಿ ನೀರು ಬೆಂಗಳೂರಿಗೆ: ಪಕ್ಷಾತೀತವಾಗಿ ಹೋರಾಡೋಣ

KannadaprabhaNewsNetwork | Published : Apr 24, 2025 11:51 PM

ಸಾರಾಂಶ

ಬೆಂಗಳೂರಿಗೆ ಶರಾವತಿ ನದಿ ನೀರು ಸಾಗಿಸುವ ಯೋಜನೆ ವಿರೋಧಿಸಿ ಮೇ 26ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಮೇ 21 ಹಾಗೂ 22ರಂದು ಹೊನ್ನಾವರದಲ್ಲಿ, ನಗರಬಸ್ತಿಕೇರಿಯಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಶರಾವತಿ ಆರತಿ ಸಮಿತಿ ಗೌರವಾಧ್ಯಕ್ಷ ಜೆ.ಟಿ. ಪೈ ಹೇಳಿದ್ದಾರೆ.

ಹೊನ್ನಾವರ: ತಾಲೂಕಿನಲ್ಲಿ ಹರಿಯುತ್ತಿರುವ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಪಂಪ್‌ ಮಾಡುವ ಯೋಜನೆ ಮೂಲಕ ಸಾಗಿಸುವುದನ್ನು ವಿರೋಧಿಸಿ ಎಲ್ಲರೂ ಹೋರಾಡಬೇಕು. ಈ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ಲಯನ್ಸ್ ಸಭಾಭವನದಲ್ಲಿ ಶರಾವತಿ ಆರತಿ ಉತ್ಸವ ಸಮಿತಿ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಆನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಯೋಜನೆ ನಿಲ್ಲಿಸಬೇಕೆಂದು ಸಮಿತಿಯಿಂದ ಪೂರ್ವಭಾವಿ ಸಭೆ ನಡೆಸಿ, ಕೆಲವು‌ ನಿರ್ಣಯ ಕೈಗೊಂಡಿದ್ದೇವೆ. ಯೋಜನೆ ಜಾರಿಯಾದರೆ ಮುಂದೆ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಈ ಯೋಜನೆ ನಿಲ್ಲಿಸಲು ಶಪಥ ಮಾಡಬೇಕು ಎಂದರು.

ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಕೈಗಾ, ಹೊನ್ನಾವರ ಬಂದರಿನಂತಹ ಅನೇಕ ಯೋಜನೆ ನಮ್ಮ ಜಿಲ್ಲೆಗೆ ತಂದು ಹಾಕಿದ್ದಾರೆ. ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಇದು. ನಮ್ಮ ಜಿಲ್ಲೆಗೆ ಹಾಗೂ ಜನರಿಗೆ ಮಾಡಿದ ದ್ರೋಹವಾಗಿದೆ. ನಮ್ಮ ಜನ ಉಪ್ಪುನೀರು ಕುಡಿಯುವ ಪರಿಸ್ಥಿತಿ ಬರಲಿದೆ. ಜನವಸತಿ ಪ್ರದೇಶಕ್ಕೆ ಸಮಸ್ಯೆ ಆಗಲಿದೆ. ಮುಂದಿನ ಪೀಳಿಗೆ ಸರ್ವನಾಶ ಮಾಡಲು ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಆರೋಪಿಸಿದರು.

ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಅಖಿಲೇಶ್ ಚಿಪ್ಪಳ್ಳಿ ಮಾತನಾಡಿ, ಈ ಯೋಜನೆಯಿಂದ ಹಾನಿಯೇ ಹೊರತು ಯಾವ ಲಾಭ ಇಲ್ಲ. ಶರಾವತಿ ಕಣಿವೆ ಮೇಲೆ ದೊಡ್ಡ ದೌರ್ಜನ್ಯ ನಡೆಯುತ್ತಿದೆ. ಇದು ದೇಶದ ಆಸ್ತಿ, ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಶರಾವತಿ ಆರತಿ ಸಮಿತಿ ಗೌರವಾಧ್ಯಕ್ಷ ಜೆ.ಟಿ. ಪೈ, ಮೇ 26ರಂದು ಬ್ರಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ಜನ ಎಚ್ಚೆತ್ತುಕೊಳ್ಳಲಿ. ಮೇ 21 ಹಾಗೂ 22ರಂದು ಹೊನ್ನಾವರದಲ್ಲಿ, ನಗರಬಸ್ತಿಕೇರಿಯಲ್ಲಿ ಪಾದಯಾತ್ರೆ ನಡೆಯಲಿದೆ ಎಂದರು.

ಶರಾವತಿ ಆರತಿ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ, ಕಾರ್ಯದರ್ಶಿ ಜಿ.ಜಿ. ಶಂಕರ, ವಿನೋದ್ ನಾಯ್ಕ ಮಾವಿನಹೊಳೆ, ವಿಶ್ವನಾಥ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಾಗರಾಜ ಭಟ್, ಚಂದ್ರಕಾಂತ ಕೊಚರೆಕರ್, ಜಿ.ಎನ್. ಗೌಡ ಮತ್ತಿತರರಿದ್ದರು.

Share this article