ರೈತ ಸಮೂಹ ಆರ್ಥಿಕ ಸಬಲತೆ ಸಾಧಿಸಲು, ಸಂಕಷ್ಟಗಳಿಂದ ಪಾರಾಗಲು ದಾರಿ ಹುಡುಕಲಿ : ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Updated : Dec 24 2024, 08:23 AM IST

ಸಾರಾಂಶ

ರೈತನಿಗೆ ಬಲ ತುಂಬುವ ಆಶಯಗಳ ಸರ್ಕಾರಗಳಿಗಿದ್ದರೂ ಹಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗುವುದಿಲ್ಲ ಎಂದು ಶಾಸಕ ಮಾನೆ ಹೇಳಿದರು.

ಹಾನಗಲ್ಲ: ರೈತ ಸಮೂಹ ಸಂಕಷ್ಟಗಳಿಂದ ಪಾರಾಗಲು ದಾರಿ ಹುಡುಕಲಿ. ಈ ಬಗ್ಗೆ ವಿಸ್ತೃತ ಚರ್ಚೆ, ಸಂವಾದಗಳು ನಡೆಯಲಿ. ಅಗತ್ಯ ಮಾರ್ಗಗಳೊಂದಿಗೆ ಆರ್ಥಿಕ ಸಬಲತೆ ಸಾಧಿಸಲು ಪ್ರೇರಣೆ ನೀಡುವ ಕೆಲಸವಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಭಾಗವಹಿಸಿ, ಮಾಜಿ ಪ್ರಧಾನಿ ಚೌಧರಿ ಚರಣ ಸಿಂಗ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸಮಸ್ಯೆಗಳಿಗೆ ಕೊನೆ ಇಲ್ಲ. ಒಂದು ಸಮಸ್ಯೆ ಬಗೆಹರಿಸುವ ಹೊತ್ತಿಗೆ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ರೈತನಿಗೆ ಬಲ ತುಂಬುವ ಆಶಯಗಳ ಸರ್ಕಾರಗಳಿಗಿದ್ದರೂ ಹಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗುವುದಿಲ್ಲ. ಬರೀ 5, 10 ಗುಂಟೆ ಭೂಮಿಯಲ್ಲಿ ಲಕ್ಷಾಂತರ ಆದಾಯ ಪಡೆಯುತ್ತಿರುವ ಹಲವು ಸಾಧಕರು ನಮ್ಮ ಮಧ್ಯೆ ಇದ್ದಾರೆ. ಅಂಥವರನ್ನು ಆಹ್ವಾನಿಸಿ, ಮಾರ್ಗದರ್ಶನ ಕೊಡಿಸಿ, ದುಡಿಮೆಯ ಮಾರ್ಗಗಳ ಕುರಿತು ಮಾಹಿತಿ ದೊರಕಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದರು.

ನಮ್ಮ ಭಾಗದಲ್ಲಿ ಸೋಲಾರ್ ಪಂಪ್‌ಸೆಟ್‌ಗಳ ಬಳಕೆಯ ಕುರಿತು ರೈತ ಸಮೂಹದಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ರಾಯೋಗಿಕವಾಗಿ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಏಳೆಂಟು ಪಂಪ್‌ಸೆಟ್‌ಗಳನ್ನು ಅಳವಡಿಸಿದರೆ ಇನ್ನುಳಿದ ರೈತರೂ ಅವುಗಳ ಕಾರ್ಯವೈಖರಿ ಕುರಿತು ಮಾಹಿತಿ ಪಡೆಯುವುದು ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಬೇಕಿದೆ. ಇದೀಗ ಸುಧಾರಿತ ಪದ್ಧತಿಯಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಸಲಾಗುತ್ತಿದ್ದು, ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮಸ್ಯೆಗೂ ಮುಕ್ತಿ ಹಾಡಬಹುದಾಗಿದೆ. ರೈತರು ರಾತ್ರಿ ಹೊತ್ತು ನಿದ್ರೆಗೆಟ್ಟು ನೀರು ಹಾಯಿಸುವುದು ತಪ್ಪಲಿದೆ. ಈ ಬಗ್ಗೆ ರೈತ ಸಂಘಟನೆಗಳು ಮುತುವರ್ಜಿ ವಹಿಸಿ, ರೈತರನ್ನು ಮನವೊಲಿಸುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರಶ್ಮೀ, ಮಣ್ಣು ರೈತನ ಕಣ್ಣು. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ರೈತನ ಜವಾಬ್ದಾರಿಯಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದ್ದು, ಸಾವಯವ ಗೊಬ್ಬರ ಬಳಸುವ ಮೂಲಕ ಭೂಮಿಯ ಉತ್ತಮ ಇಳುವರಿ ಪಡೆಯುವುದರೊಂದಿಗೆ ಫಲವತ್ತತೆಯನ್ನು ಉಳಿಸಿಕೊಳ್ಳಬಹುದು. ಮಣ್ಣು ಪರೀಕ್ಷಾ ಕೇಂದ್ರಗಳಿಂದ ಮಣ್ಣನ್ನು ಪರೀಕ್ಷಿಸಿ ತಕ್ಕ ಪೋಷಕಾಂಶಗಳನ್ನು ಭೂಮಿಗೆ ನೀಡುವ ಅವಶ್ಯಕತೆ ಇದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ, ತಾಪಂ ಕೆಡಿಪಿ ಸದಸ್ಯ ಮಾರ್ತಾಂಡಪ್ಪ ಮಣ್ಣಮ್ಮನವರ, ರೈತ ಸಂಘಟನೆಗಳ ಮುಖಂಡರಾದ ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಮಹರುದ್ರಪ್ಪ ಕೂಸನೂರ, ಚನ್ನಬಸಪ್ಪ ಹಾವಣಗಿ, ಮಹಲಿಂಗಪ್ಪ ಬಿದರಮಳಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ, ಸುವರ್ಣ ಬಿಷ್ಠಕ್ಕನವರ, ಸಂಗಮೇಶ ಹಕ್ಕಲಪ್ಪನವರ, ಯಂಕಾನಂದ ಪೂಜಾರ, ಗುರುನಾಥ ಗಾವಣೆಕರ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಅವಲಂಬನೆ ಕಮ್ಮಿಯಾಗಲಿ

ಕಾಲ ಬದಲಾಗಿದೆ. ಈ ಮಧ್ಯೆ ರೈತ ಏನು ಮಾಡಬೇಕು ಎನ್ನುವುದನ್ನು ಅರಿಯದಾಗಿದ್ದಾನೆ. ಸೃಷ್ಟಿಯ ಎದುರು ವಿಜ್ಞಾನವೂ ಮಂಕಾಗಿ ಕಾಣುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಗಳ ಕಾರಣ ಆರ್ಥಿಕ ಸಂಕಷ್ಟ ಸಾಮಾನ್ಯವಾಗಿದೆ. ದುಡಿಮೆಯ ಮಾರ್ಗಗಳ ಕುರಿತು ತಿಳಿಸಿ, ರೈತನನ್ನು ಜಾಣತನದಿಂದ ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡಬೇಕಿದೆ. ಸರ್ಕಾರದ ಮೇಲಿನ ಅವಲಂಬನೆ ಕಡಿಮೆಯಾಗಬೇಕಿದೆ.

- ಶ್ರೀನಿವಾಸ ಮಾನೆ, ಶಾಸಕ

Share this article