ಹರಪನಹಳ್ಳಿ: ಸಮಾಜದ ಸುಧಾರಣೆಗೆ ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನವರ ಆಶಯಗಳನ್ನು ನಾವೆಲ್ಲಾರೂ ಪಾಲಿಸೋಣ ಎಂದು ತಹಸೀಲ್ದಾರ್ ಬಿ.ವಿ. ಗಿರೀಶಬಾಬು ತಿಳಿಸಿದರು.
ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಪುರಸಭೆ ನಾಮನಿರ್ದೇಶಿತ ಸದಸ್ಯ ಹೇಮಣ್ಣ ಮೋರಿಗೇರಿ, 12ನೇ ಶತಮಾನದ ಕಾಲಘಟ್ಟದಲ್ಲಿ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು ಅಂಬಿಗರ ಚೌಡಯ್ಯನವರು ಶ್ರಮಿಸಿದರು ಎಂದು ಹೇಳಿದರು.
ಗಂಗಾಮತ ಸಮಾಜ ಹಲವು ದಶಕಗಳಿಂದ ಹಳ್ಳ-ಕೊಳ್ಳ ಕೆರೆ, ನದಿಯಲ್ಲಿ ಮೀನು ಹಿಡಿಯುವ ಕೆಲಸದಲ್ಲಿ ತೊಡಗಿಕೊಂಡಿದೆ. ಕುಲಕಸಬು ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮ್ಮ ಸಮಾಜಕ್ಕೆ ತಾಲೂಕು ಆಡಳಿತ ಮೊದಲ ಆದ್ಯತೆ ನೀಡಬೇಕು ಎಂದ ಅವರು ಸಮಾಜದ ಬಂಧುಗಳು ಆರ್ಥಿಕ ದುಂದು ವೆಚ್ಚ ಕಡಿಮೆ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅರಸನಾಳು ಗಿರಿರಾಜ ರೆಡ್ಡಿ ಮಹಾಯೋಗಿ ವೇಮನ ಕುರಿತು ಮಾತನಾಡಿ, ತನ್ನ ಎಲ್ಲ ಸುಖ ಸಂಪತ್ತನ್ನು ತ್ಯಜಿಸಿ ಸಮಾಜ ಸೇವೆ ಧಾವಿಸಿದ ಮಹಾನ್ ವ್ಯಕ್ತಿ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸೋಣ ಎಂದರು.
ಈ ಸಂದರ್ಭದಲ್ಲಿ ತಾಪಂ ಇಒ ವೈ.ಎಚ್. ಚಂದ್ರಶೇಖರ, ಕ್ಷೇತ್ರಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ, ಕೃಷಿ ಅಧಿಕಾರಿ ಉಮೇಶ, ಪದ್ಮಾವತಿ, ಬಸವರಾಜ ಚಿಗಟೇರಿ, ಸುರೇಶ ಬಾರ್ಕಿ, ಹನುಮಂತ ಸೇರಿದಂತೆ ಇತರರು ಇದ್ದರು.