ವಿಶ್ವ ಕ್ಷಯರೋಗ ದಿನಾಚರಣೆಗೆ ಚಾಲನೆ
ಕ್ಷಯರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ. ವೈದ್ಯರು ಹೇಳಿದ ರೀತಿಯಲ್ಲಿ ಸರಿಯಾದ ಚಿಕಿತ್ಸೆ ಪಡೆದರೆ, ಕ್ಷಯರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡಬಹುದು. ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡೋಣ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ವಿಜಯನಗರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕದಿಂದ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ನಾಲ್ಕು ಗ್ರಾಪಂಗಳು ಸಂಪೂರ್ಣ ಮುಕ್ತಗೊಳಿಸಿರುವ ಜತೆಗೆ ಉಳಿದ ಗ್ರಾಪಂಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಅದೇ ರೀತಿ ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಾದ ಪಪಂ, ಪುರಸಭೆ ಹಾಗೂ ನಗರಸಭೆ ಟಿಬಿ ಮುಕ್ತವಾಗಲಿ. ಇದರಲ್ಲಿ ಹೊಸಪೇಟೆ ನಗರಸಭೆಯೇ ಮೊದಲಿಗೆ ಟಿಬಿ ಮುಕ್ತವಾಗಲಿ. ಒಟ್ಟಾರೆ ಟಿಬಿ ಮುಕ್ತ ಮಾಡುವುದೇ ನಮ್ಮ ಧ್ಯೇಯ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.ಈ ಹಿಂದೆ ಟಿಬಿ ಭಯಾನಕ ರೋಗ ಎಂಬ ಭಾವನೆ ಇತ್ತು. ಆದರೆ, ಈಗ ಸರ್ಕಾರದ ಪ್ರಯತ್ನದಿಂದ ಕಡಿಮೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ನಮ್ಮ ಜಿಲ್ಲೆಯಲ್ಲಿ 1205 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 750 ಎಚ್‌ಐವಿ ಪಾಸಿಟಿವ್ ಇದೆ. 500 ಜನರು ಇತರರಿದ್ದಾರೆ. ಇಮ್ಯುನಿಟಿ ಕಡಿಮೆ ಇದ್ದವರಲ್ಲಿ ಬರುತ್ತಿದೆ. ಪೋಷಕಾಂಶ ಹೆಚ್ಚಳ ಮಾಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಈ ರೋಗ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸದೇ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು. ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿ, ಕ್ಷಯರೋಗ ನಿಯಂತ್ರಣ ಮಾಡಲು ಸರ್ಕಾರ ವಿವಿಧ ಕ್ರಮ ಕೈಗೊಂಡಿದೆ. ಪ್ರತಿ ಹಳ್ಳಿ, ಪಟ್ಟಣ, ನಗರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಡಿಎಚ್‌ಒ ಡಾ. ಎಲ್.ಆರ್. ಶಂಕರನಾಯ್ಕ ಮಾತನಾಡಿ, ಗ್ರಾಪಂಗಳಿಂದ ಟಿಬಿ ಮುಕ್ತಗೊಳಿಸಲು ಸಹಕಾರ ಬೇಕು. ಎಲ್ಲ ಪಂಚಾಯಿತಿಗಳನ್ನು ಟಿಬಿ ಮುಕ್ತಗೊಳಿಸಲು ಶ್ರಮಿಸಲಾಗುವುದು. ಮನೆಯಲ್ಲಿ ಟಿಬಿ ಒಬ್ಬರಿಗೆ ಬಂದರೆ ಉಳಿದವರಿಗೆ ಹರಡುವ ಸಾಧ್ಯತೆ ಇರುತ್ತದೆ. ರೋಗ ಲಕ್ಷಣಗಳು ಕಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ಸಮೀಪದ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ದೃಢಪಟ್ಟರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬೇಗ ಗುರುತಿಸಿದರೆ ಹರಡುವಿಕೆ ತಡೆಯಬಹುದು. ಇದರಿಂದ ನಿಯಂತ್ರಣ ಮಾಡಲು ಸಾಧ್ಯ ಎಂದರು.
ಗ್ರಾಪಂಗಳಿಗೆ ಪುರಸ್ಕಾರ:
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ, ಹಿರಿಯ ವೈದ್ಯ ಡಾ. ಮೃತ್ಯುಂಜಯ ವಸ್ತ್ರದ, ಡಾ. ಸತೀಶ್ಚಂದ್ರ, ಡಾ. ರಾಧಿಕಾ, ಡಾ. ಷಣ್ಮುಖ ನಾಯ್ಕ, ಟಿಎಚ್‌ಒ ಡಾ. ಬಸವರಾಜ, ಡಾ. ಸ್ವಪ್ನಾ ಕಟ್ಟಿ, ಡಾ. ಸೋಮಶೇಖರ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಮತ್ತಿತರರಿದ್ದರು.