2030ರೊಳಗೆ ಏಡ್ಸ್ ಸೋಂಕು ತೊಲಗಿಸಲು ಶಪಥ ಮಾಡೋಣ

KannadaprabhaNewsNetwork |  
Published : Dec 03, 2023, 01:00 AM IST
2ಕೆಪಿಎಲ್21 ಕೊಪ್ಪಳ ನಗರದ ದಕ್ಷಿಣ ಭಾರತ ಹಿಂದಾ ಪ್ರಚಾರ ಸಭಾ ಸಭಾಂಗಣದಲ್ಲಿ ವಿಶ್ವಏಡ್ಸ್ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ. | Kannada Prabha

ಸಾರಾಂಶ

ಎಚ್‌ಐವಿ ನಿಯಂತ್ರಣ, ಸೇವಾ ಸೌಲಭ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಎಲ್ಲ ಇಲಾಖೆಗಳಿಂದ ಸಿಗುವ ಸಾಮಾಜಿಕ ಸೌಲಭ್ಯಗಳು ಸೋಂಕಿತ ಸಮುದಾಯಕ್ಕೆ ಲಭ್ಯವಾಗುವಂತೆ ಸಮಾಲೋಚನೆ ಮಾಡಿ ಸರ್ಕಾರದ ಸೇವೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಪ್ರೇರೇಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಎಚ್‌ಐವಿ ನಿಯಂತ್ರಣ, ಸೇವಾ ಸೌಲಭ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಎಲ್ಲ ಇಲಾಖೆಗಳಿಂದ ಸಿಗುವ ಸಾಮಾಜಿಕ ಸೌಲಭ್ಯಗಳು ಸೋಂಕಿತ ಸಮುದಾಯಕ್ಕೆ ಲಭ್ಯವಾಗುವಂತೆ ಸಮಾಲೋಚನೆ ಮಾಡಿ ಸರ್ಕಾರದ ಸೇವೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಪ್ರೇರೇಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಆರೋಗ್ಯ ಸಂವರ್ಧನ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಭಾರತರತ್ನ ಅಟಲ್ ಬಿಹಾರ್ ವಾಜಪೇಯಿ ಕಾನೂನು ಮಹಾವಿದ್ಯಾಲಯದದಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2030ರ ಒಳಗೆ ಎಚ್ಐವಿ ಸೋಂಕನ್ನು ನಿರ್ಮೂಲನೆ ಮಾಡಲು ನಾವೆಲ್ಲರೂ ಶಪಥ ಮಾಡೋಣ ಎಂದರು.

ಎಚ್ಐವಿ ಸೋಂಕಿನ ಹರಡುವಿಕೆಯ ಬಗ್ಗೆ ತಿಳಿವಳಿಕೆಯಿಲ್ಲದಿರುವುದು ಮತ್ತು ಸುರಕ್ಷಿತ ಲೈಂಗಿಕ ನಡವಳಿಕೆಯ ಬಗ್ಗೆ ಮಾಹಿತಿ ಇಲ್ಲದಿರುವುದು ಕೂಡ ಸೋಂಕಿನ ಹರಡುವಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ. ಲಭ್ಯವಿರುವ ಸೇವೆಗಳ ಮತ್ತು ನಿರಂತರ ಆರೈಕೆ ಪಡೆದುಕೊಳ್ಳದಿರುವುದು ಏಡ್ಸ್ ಸಂಬಂಧಿತ ಮರಣಗಳಿಗೆ ಕಾರಣವಾಗುತ್ತದೆ. ಎಲ್ಲ ಎಚ್ಐವಿ ಸೋಂಕಿತರು ಸರ್ಕಾರದಿಂದ ಲಭ್ಯವಿರುವ ಸಾಮಾಜಿಕ ಸವಲತ್ತುಗಳನ್ನು ಪಡೆದು ಅವರು ಇತರರಂತೆ ಸಮಾಜದಲ್ಲಿ ಬದುಕಲು ದಾರಿ ಮಾಡಿಕೊಡಬೇಕು. ಅವರಿಗೆ ಕಾನೂನು ನೆರವು ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಶಿಧರ್ ಪ್ರಾಸ್ತಾವಿಕ ಮಾತನಾಡಿ, ಸಮುದಾಯಗಳು ಮುನ್ನಡೆಸಲಿ ಎಂಬುದು ವಿಶ್ವ ಏಡ್ಸ್ ದಿನ–2023ರ ಘೋಷ ವಾಕ್ಯವಾಗಿದೆ. ಎಚ್ಐವಿ ಸೋಂಕು ತಡೆಗಟ್ಟಲು ಜನ ಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚಿಂತನೆ ನಡೆಸುವ ದಿನ ಇದಾಗಿದೆ. ಈ ವರ್ಷ ಎಚ್ಐವಿ ಏಡ್ಸ್ ಸೋಂಕಿತರಿಗೆ ಅಗತ್ಯವಾದ ಸೇವೆಗಳು ಹಾಗೂ ಸೌಲಭ್ಯಗಳನ್ನು ಸೂಕ್ತವಾಗಿ ಒದಗಿಸುವ, ಸೋಂಕಿತರಿಗೆ ಕಳಂಕ ಹಾಗೂ ತಾರತಮ್ಯದ ವಿರುದ್ಧ ರಕ್ಷಣೆ ಕೊಡಬಹುದಾದ ಮಾನವ ಹಕ್ಕುಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಟಲ್ ಬಿಹಾರ್ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಉಷಾದೇವಿ ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ್, ಜಿಲ್ಲಾ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ, ಎನ್.ಎಸ್.ಎಸ್ ಅಧಿಕಾರಿ ರವಿ ಬಡಿಗೇರ್, ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಬಸವರಾಜ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ ಹಾಗೂ ರೆಡ್‌ರಿಬ್ಬನ್ ಕ್ಲಬ್ ಕಾಲೇಜುಗಳಿಗೆ ಸನ್ಮಾನ ನಡೆಯಿತು. ಮುನಿರಾಬಾದ್‌ನ ತೋಟಗಾರಿಕೆ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಎಚ್ಐವಿ ಏಡ್ಸ್ ಅರಿವು ಮೂಡಿಸುವ ನಾಟಕ ಪ್ರದರ್ಶನ ನಡೆಯಿತು. ಡೊಳ್ಳು ಕುಣಿತದ ಪ್ರದರ್ಶನ ಕೂಡ ನಡೆಯಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ