ಮಹದಾಯಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲಿ: ವೀರೇಶ ಸೊಬರದಮಠ

KannadaprabhaNewsNetwork | Published : Dec 9, 2024 12:48 AM

ಸಾರಾಂಶ

ಮಹದಾಯಿ ಯೋಜನೆ ಜಾರಿ ಕುರಿತು ಡಿ. 11, 12ರಂದು ಸರ್ವ ಪಕ್ಷಗಳ ಸಂಸದರ ಸಭೆ ಕರೆದು, ಚರ್ಚಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಒತ್ತಾಯಿಸಿದರು.

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಯಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಭಾಪತಿಗಳು ಡಿ. 9ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಡಿ. 11, 12ರಂದು ಸರ್ವ ಪಕ್ಷಗಳ ಸಂಸದರ ಸಭೆ ಕರೆದು, ಚರ್ಚಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಯಾಗಲು ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ಹಾಗೂ ಪರಿಸರ ಇಲಾಖೆ ಪರವಾನಗಿ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆ ಕರೆಯುವಂತೆ ಸಭಾಪತಿಗಳಿಗೆ ಮನವಿ ಮಾಡಲಾಗಿದ್ದು, ಸಭೆ ಕರೆಯುವ ವಿಶ್ವಾಸವಿದೆ. ಒಂದು ವೇಳೆ ಸಭೆ ಕರೆಯದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.

ಮಹದಾಯಿ ಮತ್ತು ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಸ್ಥಳೀಯ ರಾಜಕಾರಣಿಗಳು ಪ್ರಾಮಾಣಿಕವಾಗಿ ಯಾರೊಬ್ಬರೂ ಪ್ರಯತ್ನ ಮಾಡಲಿಲ್ಲ. ಕೇವಲ ಈ ಯೋಜನೆಯನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಂಡು, ಸಮಯ ವ್ಯರ್ಥ ಮಾಡುತ್ತಿದ್ದಾರೆ. ಯಾರೊಬ್ಬರಿಗೂ ರೈತರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ನೋವಿನ ಸಂಗತಿ ಎಂದರು.

ಯೋಜನಾ ಪ್ರದೇಶದಲ್ಲಿ ಟೈಗರ್ ಕಾರಿಡಾರ್ ಇದೆ ಎಂದು ಸುಳ್ಳು ಹೇಳುವ ಮೂಲಕ ಅದನ್ನು ನಂಬಿಸುವ ಪ್ರಯತ್ನವನ್ನು ಕೆಲ ಅಧಿಕಾರಿ ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ. ಅದೇ ಪ್ರದೇಶದಲ್ಲಿ ಈಗಾಗಲೇ ರಾಜಾರೋಷವಾಗಿ ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಟೈಗರ್ ಕಾರಿಡಾರ್‌ನಲ್ಲಿ ರೆಸಾರ್ಟ್‌ಗೆ ಏಕೆ ಅನುಮತಿ ನೀಡಲಾಗಿದೆ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ರಾಜ್ಯದ ಎಲ್ಲ ಸಂಸದರು ಒಟ್ಟಾಗಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸ್ಮಾರಕ ನಿರ್ಮಾಣಕ್ಕೆ ಆಗ್ರಹ

ಗದಗ ಜಿಲ್ಲೆ ನರಗುಂದದಲ್ಲಿ ಅನೇಕ ರೈತಪರ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಅವರಿಗೆ ಕರ್ನಾಟಕ ನೀರಾವರಿ ಇಲಾಖೆಗೆ ಸಂಬಂಸಿದ 4 ಎಕರೆ ಜಮೀನು ಮಂಜೂರು ಮಾಡಿ, ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಬೇಕು. ಈಗಾಗಲೇ ಈ ಬೇಡಿಕೆ ಆಗ್ರಹಿಸಿ ಕಳೆದ 4 ತಿಂಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಬೆಳಗಾವಿ ಅವೇಶನದಲ್ಲಿಯೂ ಮಹದಾಯಿ ಯೋಜನೆ ಜಾರಿ ಮತ್ತು ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಅಧಿಕಾರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಖರೀದಿ ಕೇಂದ್ರ ಸ್ಥಾಪಿಸಿ

ರೈತರು ಬೆಳೆದ ಹಿಂಗಾರಿ ಬೆಳೆಗಳಾದ ಕಡಲೆ, ಕುಸುಬಿ, ಜೋಳ ಖರೀದಿ ಡಿಸೆಂಬರ್ ತಿಂಗಳೊಳಗೆ ಸರ್ಕಾರ ಬೆಂಬಲ ಬೆಲೆಯನ್ನು ಶೇ. 25ರಷ್ಟು ಹೆಚ್ಚಿಸಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಬೇಗ ರೈತರ ನೋಂದಣಿ ಆರಂಭಿಸಬೇಕು. ಪ್ರತಿ ರೈತರಿಂದ ಎಕರೆಗೆ 5 ಕ್ವಿಂಟಲ್ ಖರೀದಿ ಮಾಡಬೇಕು. ಇದೇ ತಿಂಗಳೊಳಗೆ ಸರ್ಕಾರ ಆದೇಶ ಹೊರಡಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಣ್ಣ ಆಲೇಕರ್, ರಾಜ್ಯ ವಕ್ತಾರ ಗುರು ರಾಯನಗೌಡ್ರ ಸೇರಿದಂತೆ ಹಲವರಿದ್ದರು.

Share this article