ಬಳ್ಳಾರಿ: ಪರಸ್ಪರ ಸ್ನೇಹ, ಸಹಬಾಳ್ವೆ, ಸೌಜನ್ಯ, ಸೌಹಾರ್ದ, ಶಾಂತಿಯಿಂದ ನಾವೆಲ್ಲರೂ ಬದುಕಿ ಭಾರತದ ನೆಲದಲ್ಲಿ ಬಹುತ್ವವನ್ನು ಎತ್ತಿ ಹಿಡಿಯಬೇಕಾದ ಅಗತ್ಯವಿದೆ ಎಂದು ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಅಭಿಪ್ರಾಯಪಟ್ಟರು.
ನಮ್ಮ ಸುತ್ತಲಿನ ಸಮಾಜದಲ್ಲಿ ಮೋಸ, ವಂಚನೆ, ಶೋಷಣೆ, ಅತ್ಯಾಚಾರ, ದೌರ್ಜನ್ಯ, ಮರ್ಯಾದೆಗೇಡು ಹತ್ಯೆ ,ಜಾತಿ ತಾರತಮ್ಯ ಕೃತ್ಯಗಳು ಢಾಳಾಗಿ ಗೋಚರಿಸುತ್ತಿವೆ. ಇವುಗಳ ಸಂಕಟದ ಮಗ್ಗಲು ಕಲಕಬೇಕಿದೆ. ಹೊಸ ತಲೆಮಾರು ಗಂಭೀರವಾಗಿ ಆಲೋಚಿಸಿ,ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿ ನವ ಸಮಾಜಕ್ಕೆ ಕೈಜೋಡಿಸಬೇಕಿದೆ ಎಂದು ವಿಶ್ಲೇಷಿಸಿದರು.
ಬದಲಾದ ಸಾಮಾಜಿಕ, ರಾಜಕೀಯ ಕಾಲಘಟ್ಟದಲ್ಲಿ ಜಗದ ಆಗು- ಹೋಗುಗಳನ್ನು ತೆರೆದ ಕಣ್ಣಿನಿಂದ ಗಮನಿಸಬೇಕು. ಸಮಕಾಲೀನ ಸಮಾಜದಲ್ಲಿ ಜಾತ್ಯತೀತ ಮನೋಭಾವ, ಮಾನವೀಯ ಮೌಲ್ಯ, ಸೌಹಾರ್ದತಾ ಪ್ರಜ್ಞೆಯನ್ನು ಅಂತರ್ಗತವಾಗಿಸಿಕೊಳ್ಳಬೇಕಿದೆ. ಬಹುಭಾಷಿಕ, ಬಹು ಸಂಸ್ಕೃತಿಯ ಗ್ರಾಮ ಭಾರತದಲ್ಲಿ ಉತ್ತಮ ಲೋಕದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಒತ್ತಿ ಹೇಳಿದರು.ದೇಶದ ಭವಿಷ್ಯವನ್ನು ಅಡಗಿಸಿಕೊಂಡ ಯುವ ಸಮುದಾಯ ಕನ್ನಡ ನಾಡು, ನುಡಿ, ನೆಲ, ಜಲ, ಪರಿಸರದ ಬಗೆಗೆ ಪ್ರೀತಿ ಅಭಿಮಾನ, ವಿವೇಕ ಮತ್ತು ನೈತಿಕ ಕಾಳಜಿಯನ್ನು ಗಾಢವಾಗಿ ಹೊಂದಬೇಕು. ಆರೋಗ್ಯಕರ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಹುರುಪಿನಿಂದ ದೃಢವಾದ ಹೆಜ್ಜೆಗಳನ್ನು ಊರಬೇಕಾಗಿದೆ ಎಂದರು.
ಇತ್ತೀಚೆಗೆ ಸಮಾಜದಲ್ಲಿ ಸೌಹಾರ್ದ, ಸಹಿಷ್ಣುತೆ, ಪರಸ್ಪರ ಗೌರವದ ಮೌಲ್ಯಗಳು ಕುಸಿಯುತ್ತಿರುವುದು ಚಿಂತಾಜನಕ ಬೆಳವಣಿಗೆಯಾಗಿದೆ. ವಿಭಿನ್ನ ಧರ್ಮ, ಭಾಷೆ ಹಾಗೂ ಸಂಸ್ಕೃತಿಗಳ ನಡುವೆ ಬೆಳೆದಿದ್ದ ಒಗ್ಗಟ್ಟು ನಿಧಾನವಾಗಿ ಕುಗ್ಗುತ್ತಿದೆ.
ಸಮಾಜದಲ್ಲಿ ಶಾಂತಿ, ಸೌಹಾರ್ದ ಉಳಿಸಿಕೊಳ್ಳಲು ಸಹಿಷ್ಣುತೆ, ಪರಸ್ಪರ ಗೌರವ ಹಾಗೂ ಮಾನವೀಯ ಮೌಲ್ಯಗಳ ಪುನರುಜ್ಜೀವನ ಅಗತ್ಯವಾಗಿದೆ ಎಂದು ದೊಡ್ಡಬಸವರಾಜ್ ಅವರು ತಿಳಿಸಿದರು.