ಸಂಡೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಬಹುದು ಎಂಬ ಚರ್ಚೆಗೆ ಶೀಘ್ರವೇ ಉತ್ತರ ದೊರೆಯಲಿದೆ. ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್‌ಸ್ವಾಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಿಳಿಸಿದರು.
ತಾಲೂಕಿನ ವಂಡರ್ ಮೌಂಟೇನ್ ವ್ಯಾಲಿ ರೆಸಾರ್ಟ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ಇಂದು ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಗಳಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.
ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವಿವಿಧ ರೀತಿಯ ಅಡೆತಡೆಗಳಿದ್ದರೂ ಜನರು ಕಷ್ಟಪಟ್ಟು ದುಡಿದ ಹಣ ಅವರ ಕುಟುಂಬದ ಒಳಿತಿಗಾಗಿ ವಿನಿಯೋಗವಾಗುವಂತೆ ಮಾಡಲು ಲಾಟರಿ, ಸರಾಯಿ ಮಾರಾಟ ನಿಷೇಧಿಸಿದರು. ಅವರು ಮಾಡಿದ ರೈತರ ಸಾಲಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಗಳು ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿವೆ. ರಾಜ್ಯದ ಅಭಿವೃದ್ಧಿಗಾಗಿ ಪಂಚರತ್ನ ಯೋಜನೆಗಳನ್ನು ಹಾಕಿಕೊಂಡಿದ್ದರು ಎಂದು ತಿಳಿಸಿದರು.ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಅಭಿವೃದ್ಧಿ ಶೂನ್ಯವಾಗಿದೆ. ಅವರು ಜಾರಿಗೆ ತಂದಿರುವ ವಿವಿಧ ಭಾಗ್ಯಗಳಿಗೂ ಹಣವನ್ನು ಕೊಡಲಾಗುತ್ತಿಲ್ಲ ಎಂದು ದೂರಿದರು.
ಮಾಜಿ ಸಂಸದ ಅನಿಲ್ ಲಾಡ್ ಮಾತನಾಡಿ, ಮೀಸಲಾತಿ ಅಡಿಯಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು. ಕ್ಷೇತ್ರದ ಜನರು ಈ. ತುಕಾರಾಂ ಅವರನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಜಿಲ್ಲೆಯ ಜನತೆ ಸಂಸದರನ್ನಾಗಿ ಮಾಡಿದ್ದಾರೆ. ಅವರು ಮನಸ್ಸು ಮಾಡಿ ಇತರರಿಗೆ ವಿಧಾನಸಭಾ ಕ್ಷೇತ್ರವನ್ನು ತ್ಯಾಗ ಮಾಡಬೇಕು ಎಂದರು. ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ. ಇಲ್ಲಿಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದರಲ್ಲದೇ, ಉಪ ಚುನಾವಣೆಯಲ್ಲಿ ಎಲ್ಲರೂ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸೋಣ ಎಂದು ತಿಳಿಸಿದರು.ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ ನಾಯ್ಕ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ವಿಜಯನಗರ ಜಿಲ್ಲಾಧ್ಯಕ್ಷ ಕೊಟ್ರೇಶಪ್ಪ, ರೈತ ಮುಖಂಡ ಲಕ್ಷ್ಮಿಕಾಂತ್‌ರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಸೋಮಪ್ಪ ಮಾತನಾಡಿದರು.
ಮಾಜಿ ಸಚಿವ ವೆಂಕಟರಾವ್ ನಾಗಗೌಡ, ಪಕ್ಷದ ಮುಖಂಡರಾದ ಚಂದ್ರಶೇಖರ್, ರಾಜಣ್ಣ, ಲಕ್ಷ್ಮಿ ಹೊಸಗೇರಪ್ಪ, ಮಲ್ಲಿಕಾರ್ಜುನ, ಸೋಮಶೇಖರ, ದೇವೇಂದ್ರಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಮೀಲಾ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಕವಿತಾ, ಕುರೆಕುಪ್ಪ ಪುರಸಭೆ ಸದಸ್ಯೆ ಲಕ್ಷ್ಮಿ ಹೊಸಗೇರಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.