ಹೂವಿನಹಡಗಲಿ: ಭಾರತದ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ, ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲೇ ಸಂವಿಧಾನ ರಚನೆಯ ಹೆಜ್ಜೆ ಗುರುತುಗಳಿದ್ದವು. ವಿವಿಧ ಭಾಷೆ, ಧರ್ಮ, ಜಾತಿ ಮತ್ತು ನಾಗರಿಕ ಪರಂಪರೆಯ ಸಂಸ್ಕೃತಿ ಹೊಂದಿರುವ ಈ ದೇಶದಲ್ಲಿ ಮಾನವತಾದಿ, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶಿಕ್ಷಣ ತಜ್ಞ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಉತ್ತಮ ಸಂವಿಧಾನ ನೀಡಿದ್ದಾರೆ, ಅವರ ಆಶಯಗಳಿಗೆ ಧಕ್ಕೆ ಬಾರದಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಹೇಳಿದರು.
ಗಣರಾಜ್ಯೋತ್ಸವ ಕೇವಲ ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಈ ದೇಶಕ್ಕೆ ನಮ್ಮ ಹಿರಿಯ ನೀಡಿರುವ ಕೊಡುಗೆಗಳನ್ನು ಸ್ಮರಣೆ ಮಾಡುವ ದಿನವಾಗಿದೆ. ಭವಿಷ್ಯದ ಭಾರತ ಹೇಗಿರಬೇಕೆಂಬ ಚಿಂತನೆ ಮಾಡಬೇಕಿದೆ. ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಜತೆಗೆ ಜಾಗತಿಕ ಮಟ್ಟದಲ್ಲಿ ಇಂದು ಭಾರತ 3ನೇ ಬಲಿಷ್ಠರಾಷ್ಟವಾಗಿ ಬೆಳೆಯುತ್ತಿದೆ. ಕಾನೂನುಗಳನ್ನು ಗೌರವಿಸುವ ಜತೆಗೆ ನಮ್ಮ ಜವಾಬ್ದಾರಿಯನ್ನು ಅರಿತು ನಡೆಯಬೇಕೆಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ ಕ್ಷೇತ್ರ ಬಲಿಷ್ಠವಾಗಿ ಬೆಳೆಯಲು ಸಹಕಾರಿಯಾಗಿದೆ. ಈ ನೆಲದ ಕಾನೂನು ವ್ಯವಸ್ಥೆ ಅರಿವು ಮೂಡಿಸುವಂತಹ ಕೆಲಸ ಆಗಬೇಕಿದೆ. ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿಸುವ ಜತೆಗೆ ನಮ್ಮ ಹಕ್ಕು ಮತ್ತು ಕರ್ತವ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣವೇ ಆಧಾರ ಸ್ತಂಭವಾಗಿದ್ದು, ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ₹12 ಕೋಟಿ ವೆಚ್ಚದಲ್ಲಿ ಶಾಲಾ ಕೋಣೆಗಳ ದುರಸ್ತಿ ಜತೆಗೆ ಸ್ಮಾಟ್ ಬೋರ್ಡ್‌ಗಳ ಅಳವಡಿಸಿ ಆ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದಾಗ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಮುಖಂಡರಾದ ಎಚ್.ಪೂಜೆಪ್ಪ, ವಾರದ ಗೌಸ್ ಮೋಹಿದ್ದೀನ್, ಪುನೀತ್ ದೊಡ್ಮನಿ, ಮೇಟಿ ಹುಲುಗೇಶ, ಎ.ಜಿ. ವೀರೇಶ, ತಾಪಂ ಇಒ ಜಿ.ಪರಮೇಶ್ವರ, ಬಿಇಒ ಮಹೇಶ ಪೂಜಾರ್, ಸಿಪಿಐ ದೀಪಕ್ ಆರ್ ಬೂಸರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ಸಮಾಜ ಕಲ್ಯಾಧಿಕಾರಿ ಆನಂದ್ ಡೊಳ್ಳಿನ್, ಸಿಡಿಪಿಒ ರಾಮನಗೌಡ, ಬಿ.ರಾಜಪ್ಪ, ಪ್ರದೀಪಕುಮಾರ, ರಮೇಶ ಇದ್ದರು.ಕರಾಟೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಹಾಗೂ ತಾರ್ಮದ ಪದಕ ಪಡೆದ ತಾಲೂಕಿನ ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4 ಕರಾಟೆ ಪಟುಗಳು, ಮಾಜಿ ಸೈನಿಕರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಿಇಒ ಮಹೇಶ ಪೂಜಾರ್ ಸ್ವಾಗತಿಸಿದರು, ದ್ವಾರಕೀಶ ರೆಡ್ಡಿ ನಿರೂಪಿಸಿದರು. ಅರ್ಚನಾ ಜೋಷಿ ಪ್ರಾರ್ಥಿಸಿದರು.ಇದಕ್ಕೂ ಮುನ್ನ ಪಟ್ಟಣದ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಭಾತ್ ಪೇರಿ ನಡೆಸಿದರು. ಕಾರ್ಯಕ್ರಮದ ನಂತರದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು.