ಸಮಾಜ ಸುಧಾರಣೆಗೆ ಕೊರೋನ ರೀತಿ ಕೆಲಸ ಮಾಡೋಣ: ರವಿ ಡಿ. ಚನ್ನಣ್ಣನವರ್‌

KannadaprabhaNewsNetwork |  
Published : Jan 19, 2025, 02:18 AM IST
18ಎಚ್‌ಪಿಟಿ1- ಹೊಸಪೇಟೆಯ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಶ್ರೀ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಸಂಘಕ್ಕೆ ಅಗ್ನಿ ಶಾಮಕ ಮತ್ತು ತುರ್ತುಸೇವೆಗಳ ಉಪ ಪೊಲೀಸ್‌ ಮಹಾ ನಿರೀಕ್ಷಕ  ರವಿ ಡಿ. ಚನ್ನಣ್ಣನವರ್‌ ವಿಧ್ಯುಕ್ತ ಚಾಲನೆ ನೀಡಿದರು. | Kannada Prabha

ಸಾರಾಂಶ

ಸಮಾಜದ ಸುಧಾರಣೆಗೆ ಎಲ್ಲರೂ ಕೊರೋನ ರೀತಿ ಕೆಲಸ ಮಾಡಬೇಕು. ಉತ್ತಮ ಆಲೋಚನೆ, ಜ್ಞಾನ, ದೂರ ದೃಷ್ಟಿ ಕೊರೋನ ಮಾದರಿ ಅಂಟು ರೋಗದ ರೀತಿ ಹರಡಬೇಕು.

ಹೊಸಪೇಟೆ: ಸಮಾಜದ ಸುಧಾರಣೆಗೆ ಎಲ್ಲರೂ ಕೊರೋನ ರೀತಿ ಕೆಲಸ ಮಾಡಬೇಕು. ಉತ್ತಮ ಆಲೋಚನೆ, ಜ್ಞಾನ, ದೂರ ದೃಷ್ಟಿ ಕೊರೋನ ಮಾದರಿ ಅಂಟು ರೋಗದ ರೀತಿ ಹರಡಬೇಕು. ಆಗಲೇ ಸಮಾಜದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಅಗ್ನಿ ಶಾಮಕ ಮತ್ತು ತುರ್ತುಸೇವೆಗಳ ಉಪ ಪೊಲೀಸ್‌ ಮಹಾ ನಿರೀಕ್ಷಕ ರವಿ ಡಿ. ಚನ್ನಣ್ಣನವರ್‌ ಹೇಳಿದರು.

ನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಶ್ರೀ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಸಂಘಕ್ಕೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿ 4 ಕೋಟಿ 60 ಲಕ್ಷ ಹುದ್ದೆಗಳು ಹಾಗೂ ರಾಜ್ಯ ಸರ್ಕಾರದಲ್ಲಿ 5 ಲಕ್ಷ 50 ಸಾವಿರ ಸರ್ಕಾರಿ ಹುದ್ದೆಗಳಿವೆ. ಈ ಹುದ್ದೆಗಳನ್ನು ಪಡೆಯಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಐಎಎಸ್, ಐಪಿಎಸ್‌, ಎಂಜಿನಿಯರ್, ವೈದ್ಯರು ಆಗಿ ವಾಲ್ಮೀಕಿ ನಾಯಕ ಸಮಾಜದ ಮಕ್ಕಳು ಹೊರ ಹೊಮ್ಮಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಇಂದಿಗೂ ಬಡವರ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಹಾಗಾಗಿ ಶಿಕ್ಷಣ ಪಡೆಯುವ ಮೂಲಕ ಸರ್ಕಾರಿ ಉದ್ಯೋಗಗಳನ್ನು ಪಡೆದು, ಗಟ್ಟಿತನ ಪಡೆಯಬೇಕು ಎಂದರು.

ಪದವೀಧರ ವಿದ್ಯಾವರ್ಧಕ ಸಂಘ ಸಮಾಜದಲ್ಲಿ ಶಿಕ್ಷಣ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮೆಡಿಕಲ್‌, ಕಾನೂನು ಪದವಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವೆ. ಇದಕ್ಕಾಗಿ ಹಣ ಕೂಡ ಠೇವಣಿ ಇಡುವೆ. ಮೊದಲು ವಾಲ್ಮೀಕಿ ನಾಯಕ ಸಮಾಜದ ಯುವಕ, ಯುವತಿಯರು ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗಗಳನ್ನು ಪಡೆಯಬೇಕು ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇಂದಿಗೂ ಉಳ್ಳವರ ಕೆಲಸಗಳೇ ಆಗುತ್ತಿವೆ. ಸಾಮಾನ್ಯ ಜನರ ಕೆಲಸಗಳಾಗುತ್ತಿಲ್ಲ. ಇದರಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಇದಕ್ಕಾಗಿ ಮೊದಲು ನಾವು ಶಿಕ್ಷಣ ಪಡೆದು, ಉಳ್ಳವರ ಪರ ಧ್ವನಿ ಎತ್ತಬೇಕು. ಭಾರತ ರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಆಶಯ ಈಡೇರಿಸಬೇಕು ಎಂದರು.

ಸಮಾಜದ ಗತ ವೈಭವವನ್ನು ವಿಜೃಂಭಣೆಯಿಂದ ಸಾರುತ್ತಾ, ವರ್ತಮಾನದಲ್ಲಿ ಅಸಡ್ಡೆ, ಸೋಮಾರಿತನ ಬೆಳೆಸಿಕೊಂಡು ಜೈ ಕಾರ ಹಾಕುತ್ತಾ ಕಾಲ ಕಳೆಯಬಾರದು. ಮಾಸಿಕ ಬರೀ 10 ಸಾವಿರ ರು. ದುಡಿಯುತ್ತಾ ಕಾಲ ಕಳೆಯದೇ ಸರ್ಕಾರದ ಎಸ್ಸಿಪಿಟಿಎಸ್ಪಿಯಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಸವಲತ್ತುಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಯಾವ ಕೆಲಸವೂ ಕೀಳಲ್ಲ. ಯಾವ ಕೆಲಸವೂ ಮೇಲಲ್ಲ. ಹಾಗಾಗಿ ಆದಷ್ಟು ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕು. ಟೈಲರಿಂಗ್‌, ಡ್ರೈವಿಂಗ್‌ ಸೇರಿದಂತೆ ಕೌಶಲ್ಯಭರಿತ ಕೆಲಸಗಳತ್ತಲ್ಲೂ ದೃಷ್ಟಿ ಹರಿಸಬೇಕು. ಮೊದಲು ನಾವು ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು. ಯಾವುದೇ ನೌಕರಿ ಇರಲಿ, ಸಣ್ಣ ಕೆಲಸವೇ ಇರಲಿ. 50 ವರ್ಷಗಳ ಆರ್ಥಿಕ ಯೋಜನೆ ಹಾಕಿಕೊಳ್ಳದೇ ಇದ್ದರೆ, ನಾವು ಹಿನ್ನಡೆ ಅನುಭವಿಸುತ್ತೇವೆ ಎಂದರು.

ಸಂಘದ ಅಧ್ಯಕ್ಷ ಡಾ. ಗುಂಡಿ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ಪ್ರಾಧ್ಯಾಪಕ ಪ್ರೊ. ಎಸ್‌.ಆರ್‌. ಕೇಶವ್‌, ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶ್ರೀನಾಥ, ಡಿವೈಎಸ್ಪಿ ಡಾ. ಟಿ. ಮಂಜುನಾಥ, ಸಂಘದ ಗೋಸಲ ಬಸವರಾಜ, ಬಂಡೆ ಶ್ರೀಕಾಂತ್‌, ಪ್ರಕಾಶ ಗುಡಿ, ಕಿರಣ ಕುಮಾರ, ಕಿಚಿಡಿ ಶಿವಕುಮಾರ, ಡಾ. ಬಾಣದ ಮಂಜುನಾಥ, ಬಾಣದ ಮುರುಳೀಧರ್‌, ಡಾ. ಯಲ್ಲೇಶ್‌, ತಾಯಪ್ಪ, ಗುಜ್ಜಲ ಶಿವಲಿಂಗ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!