ಸಂಡೂರು: ಮಸಣ ಕಾರ್ಮಿಕರ ಗಣತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಸಣ ಕಾರ್ಮಿಕರ ಸಂಘದ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪತ್ರ ಚಳುವಳಿ ನಡೆಸಿದರು.
ತಮ್ಮ ಪತ್ರಗಳನ್ನು ಮುಖ್ಯಮಂತ್ರಿಗೆ ಕಳುಹಿಸಿದ ಮಸಣ ಕಾರ್ಮಿಕರು, ಶತಮಾನಗಳಿಂದ ನಮ್ಮ ಹಿರಿಯರು ಹಾಗೂ ನಾವು ಮಸಣಗಳಲ್ಲಿ ಶವ ಹೂಳುವ, ಸುಡುವ, ಹಲಗೆ ಬಾರಿಸುವ ಮತ್ತು ಮಸಣ ಸ್ವಚ್ಛಗೊಳಿಸುವ ಕೆಲಸವನ್ನು ಉಚಿತವಾಗಿ ಮಾಡುತ್ತಾ ಬಂದಿದ್ದೇವೆ. ಇದರಿಂದ ನಮ್ಮ ಕುಟುಂಬಗಳಿಗೆ ಸಿಕ್ಕಿದ್ದು ಕೇವಲ ಅನಾರೋಗ್ಯದ ಭಾಗ್ಯ. ಇದೊಂದು ಸಾರ್ವಜನಿಕ ಸೇವೆಯೆಂದು ಸಮಾಜವಾಗಲಿ ಅಥವಾ ನಮ್ಮ ಸರ್ಕಾರಗಳಾಗಲಿ ಗುರುತಿಸಲಿಲ್ಲ. ನಮ್ಮನ್ನು ಬಿಟ್ಟಿ ಚಾಕರಿಯಿಂದ ಮುಕ್ತಗೊಳಿಸಿ ವೇತನ ನೀಡುವ ಮತ್ತು ಮಸಣ ಕಾವಲುಗಾರರೆಂದು ನೇಮಿಸುವ ಕೆಲಸವಾಗಲಿಲ್ಲ ಎಂದು ತಮ್ಮ ಪತ್ರಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಸಣ ಕಾರ್ಮಿಕರ ಸಂಘಟಿತ ಹೋರಾಟದ ಫಲವಾಗಿ ಸರ್ಕಾರ ಮಸಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರವರ್ಗದಡಿ ಇತರರ ಜೊತೆಗೆ ಶೇ.೧೦ ಮೀಸಲಾತಿ ಕಲ್ಪಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಸರ್ಕಾರದಿಂದ ನಾವು ಅಧಿಕೃತವಾಗಿ ಗುರುತಿಸಲ್ಪಡಬೇಕಿದೆ. ಸರ್ಕಾರ ಮಸಣ ಕಾರ್ಮಿಕರ ಗಣತಿ ನಡೆಸಬೇಕು. ೪೫ ವರ್ಷ ಮೇಲ್ಪಟ್ಟವರಿಗೆ ಪೆನ್ಷನ್, ಕುಣಿ ತೆಗೆಯುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವನ್ನಾಗಿಸುವುದು, ಅಗತ್ಯ ಪರಿಕರಗಳನ್ನು ಒದಗಿಸಬೇಕು. ಇತರೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮಸಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಜೆ. ರಾಜು, ತಾಲೂಕು ಘಟಕದ ಕಾರ್ಯದರ್ಶಿ ಎ. ಸ್ವಾಮಿ, ಮುಖಂಡರಾದ ಎಚ್.ದುರುಗಮ್ಮ, ಸದಸ್ಯರಾದ ಮೌಲ, ಕುಮಾರಸ್ವಾಮಿ, ಕೇರಳಪ್ಪ, ಬಸಪ್ಪ, ಮಾರಪ್ಪ, ತಿಮ್ಮಪ್ಪ, ತಾಯಪ್ಪ, ಹೊನ್ನೂರಪ್ಪ, ರಾಮಯ್ಯ, ಹನುಮಂತ ಮುಂತಾದವರು ಉಪಸ್ಥಿತರಿದ್ದರು.
ಸಂಡೂರಿನಲ್ಲಿ ಮಸಣ ಕಾರ್ಮಿಕರ ಸಂಘದ ಸದಸ್ಯರು ಪತ್ರ ಚಳವಳಿ ನಡೆಸಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.