ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಪತ್ರ

KannadaprabhaNewsNetwork | Published : Dec 4, 2024 12:33 AM

ಸಾರಾಂಶ

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹಾಗೂ ಸಂಬಂಧಿತ ಇತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹಾಗೂ ಸಂಬಂಧಿತ ಇತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಹೇಳಿದರು.

ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಶೌಚಾಲಯದ ಬಳಕೆಗೆ ಮಹಿಳೆಯರಿಂದ ₹10 ಪಡೆದುಕೊಳ್ಳಲಾಗುತ್ತಿದೆ. ಆದರೆ, ಎಲ್ಲಾ ಕಡೆಯಲ್ಲಿ ₹3 ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚಿನ ಹಣ ತೆಗೆದುಕೊಳ್ಳುವ ಮೂಲಕ ಟೆಂಡರ್‌ ಪಡೆದಿರುವ ಸಂಸ್ಥೆಯವರು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಹಲವು ಬಸ್‌ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ವಹಣೆಯ ಟೆಂಡರ್‌ವನ್ನು ಲಕ್ಷ್ಮೀ ಎಂಟರ್‌ ಪ್ರೈಸಸ್‌ ಅವರು ಪಡೆದುಕೊಂಡಿದ್ದಾರೆ. ಹಲವೆಡೆ ಈ ರೀತಿಯ ಹಗಲು ದರೋಡೆ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ಈ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದ ಅವರು, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ, ಇದೇ ಕಟ್ಟಡದಲ್ಲಿದ್ದರೂ ಇವರೆಗೆ ಯಾವುದೇ ರೀತಿಯ ಕ್ರಮ ಆಗಿಲ್ಲ, ಇದು, ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ ಎಂದು ಹೇಳಿದರು.

ಶೌಚಾಲಯದಲ್ಲಿ ವಿಶೇಷ ಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ. ಈ ಬಗ್ಗೆಯೂ ಕೂಡ ಸ್ಥಳದಲ್ಲಿ ಮಹಿಳೆಯರು ಭೇಟಿಯ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದಾರೆ. ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ದೂರು ಪೆಟ್ಟಿಗೆಯನ್ನು ಕಡ್ಡಾಯವಾಗಿ ಹಾಕಿರಬೇಕು. ಆದರೆ, ಈ ಪೆಟ್ಟಿಗೆಯೂ ಕೂಡ ಸ್ಥಳದಲ್ಲಿ ಇಲ್ಲ. ಇದನ್ನು ಸಹ ಅಧಿಕಾರಿಗಳು ಗಮನಿಸಿಲ್ಲ ಎಂದ ಅವರು, ಬಸ್‌ ನಿಲ್ದಾಣದಲ್ಲಿರುವ ಅಂಗಡಿಗಳು ಎಂಆರ್‌ಪಿಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯುತ್ತಿದ್ದಾರೆಂಬ ದೂರನ್ನು ಸಹ ಕೇಳಿ ಬಂದಿದೆ. ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಮಕ್ಕಳಿಗೆ ತಾಯಿಯಂದಿರು ಹಾಲು ಕುಡಿಸಲು ತಾಯಿ - ಮಡಿಲು ಕೊಠಡಿಯನ್ನು ತೆರೆಯಲಾಗಿದೆ. ಇಲ್ಲಿ ತಾಯಿ ಮತ್ತು ಮಗು ಕುಳಿತುಕೊಳ್ಳುವ ಒಳ್ಳೆಯ ವಾತಾವರಣ ಇಲ್ಲ. ಈ ಕೊಠಡಿಯನ್ನು ಗೋಡಾನ್‌ ಆಗಿ ಮಾಡಿಕೊಂಡಿದ್ದಾರೆ. ಬಸ್‌ ನಿಲ್ದಾಣಕ್ಕೆ ಬರುವ ವಿಶೇಷ ಚೇತನರಿಗೆ ಬಸ್‌ ಹತ್ತಲು ಎರಡು ವೀಲ್‌ ಚೇರ್‌ಗಳನ್ನು ಇಡಲಾಗಿದೆ. ಅದು ಬಳಕೆಯಾಗುತ್ತಿಲ್ಲ. ಬಸ್‌ ನಿಲ್ದಾಣದಲ್ಲಿ ಏನಾಗಿದೆ, ಏನೆಲ್ಲಾ ಆಗ್ತಾ ಇದೆ ಎಂಬುದು ಅಧಿಕಾರಿಗಳಾಗಲೀ, ಅಲ್ಲಿನ ಸಿಬ್ಬಂದಿಗಳಾಗಲೀ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೆ ರಾಜ್ಯದ 16 ಬಸ್‌ ನಿಲ್ದಾಣಗಳಿಗೆ ಹೀಗೆ ಭೇಟಿ ನೀಡಿದ್ದೇನೆ. ಚಿಕ್ಕಮಗಳೂರಿನಲ್ಲಿ ಅಧಿಕಾರಿಗಳ ಬೇಜವಬ್ದಾರಿ ಕಂಡು ಬಂದಿದೆ. ಬಸ್ಸಿನಲ್ಲಿ ಹಿರಿಯ ನಾಗರೀಕರ ಆಸನಗಳು ಅವರಿಗೆ ಸಿಗುವಂತೆ ನಿರ್ವಾಹಕರು ಗಮನ ಹರಿಸಬೇಕು. ಬೇರೆ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಮಹಿಳೆಯರು ತಮ್ಮ ಆಧಾರ್‌ ಕಾರ್ಡ್‌ ಮರೆತು ಬಂದಿದ್ದರೆ ಅಂತಹವರಿಗೂ ಕೂಡ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಸದಸ್ಯರಾದ ಶಮಿವುಲ್ಲಾ ಷರೀಪ್‌, ಹೇಮಾವತಿ, ಜೇಮ್ಸ್‌, ಬಸವರಾಜ್‌ ಹಾಗೂ ತಾಲೂಕು ಅಧ್ಯಕ್ಷ ಮಲ್ಲೇಶ್‌ಸ್ವಾಮಿ ಇದ್ದರು.

Share this article