ವಿಶೇಷ ವರದಿ ಗದಗ/ರೋಣ
ಸರ್ಕಾರದ ವಿವಿಧ ಅನುದಾನದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನ ಕಳೆದು ಹೋಗಿದೆ, ದಯವಿಟ್ಟು ಹುಡುಕಿ ಕೊಡಿ ಎಂದು ಆ ಗ್ರಾಮದ ಸಾರ್ವಜನಿಕರೋರ್ವರು ರಾಷ್ಟ್ರಪತಿಗಳಿಗೆ ವಿನಂತಿಸಿದ್ದು, ಇದಕ್ಕೆ ಸ್ಪಂದಿಸಿರುವ ರಾಷ್ಟ್ರಪತಿ ಭವನದ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿರುವ ಆಶ್ಚರ್ಯಕರ ಘಟನೆ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ವರದಿಯಾಗಿದೆ.ಸವಡಿ ಗ್ರಾಮದ ನಿವಾಸಿ ನಿತಿನ್ ದೊಡ್ಡಣ್ಣವರ ಎನ್ನುವವರೇ ರಾಷ್ಟ್ರಪತಿಗಳಿಗೆ ಪತ್ರ ಬರೆದು, ನಮ್ಮ ಗ್ರಾಮದ ಆಸ್ತಿ ಸಂಖ್ಯೆ 886/ಎ ದೊಡ್ಡೇದೇವರ ದೇವಸ್ಥಾನ (ದೊಡ್ಡೇದೇವರ ಸಮುದಾಯ ಭವನ), 886/ಬಿ ದೊಡ್ಡಬಸವೇಶ್ವರ ಸಮುದಾಯ ಭವನ ಎಂಬುದಾಗಿ ಗ್ರಾಪಂ ಕಡತಗಳ ದಾಖಲಾತಿಗಳಲ್ಲಿ ಉಲ್ಲೇಖವಾಗಿದೆ. ನಮ್ಮ ಗ್ರಾಮದ ದೊಡ್ಡಲಿಂಗೇಶ್ವರ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆಯಾದರೂ ದೇವಸ್ಥಾನದ ಹೆಸರಿನಲ್ಲಿ ಖಾಸಗಿ ಟ್ರಸ್ಟ್ ಸ್ಥಾಪಿಸಿ ಕಳೆದ 30 ವರ್ಷಗಳಿಂದ ಸಮುದಾಯ ಭವನ ನಿರ್ಮಾಣದ ಹೆಸರು ಹೇಳಿ ₹15 ಲಕ್ಷಕ್ಕೂ ಅಧಿಕ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಹಿನ್ನೆಲೆ: ಜಿಲ್ಲೆಯ ಪುರಾತನ ಹಾಗೂ ಐತಿಹಾಸಿಕ ದೇವಾಲಯಗಳ ಪೈಕಿ ರೋಣ ತಾಲೂಕಿನ ಸವಡಿ ಗ್ರಾಮದ ದೊಡ್ಡಲಿಂಗೇಶ್ವರ ದೇವಸ್ಥಾನವೂ ಒಂದು. ಗ್ರಾಪಂ ದಾಖಲಾತಿಯಲ್ಲಿ ಸಮುದಾಯ ಭವನ ಇರುವುದಾಗಿ ಉಲ್ಲೇಖವಾಗಿದೆ. ಆದರೆ ವಾಸ್ತವದಲ್ಲಿ ದೇವಾಲಯದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣವಾಗಿಲ್ಲ. ಗ್ರಾಮದ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನವಿದೆ ಎಂಬ ಕಡತಗಳು ಗ್ರಾಮ ಪಂಚಾಯತಿಯಲ್ಲಿರುವುದು ಮತ್ತು ಸಮುದಾಯ ಭವನವಿದೆ ಎನ್ನುವ ರೀತಿಯಲ್ಲಿ ಗ್ರಾಪಂ ಕೈಬರಹದ ಉತಾರ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಆದರೆ, ಆ ಜಾಗದಲ್ಲಿ ಯಾವ ಸಮುದಾಯ ಭವನವೂ ಇಲ್ಲದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಅನುದಾನ ಪಡೆದುಕೊಂಡು ನಿರ್ಮಿಸಲಾಗಿದೆ ಎನ್ನಲಾದ ಸಮುದಾಯ ಭವನ ಎಲ್ಲಿದೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಮುಜರಾಯಿ ಇಲಾಖೆಯಿಂದ ಸಮುದಾಯ ಭವನ ನಿರ್ಮಿಸುವುದಾಗಿ 2013 ಮತ್ತು 2020 ರಲ್ಲಿ ತಲಾ ₹3 ಲಕ್ಷ ಅನುದಾನ ಪಡೆದಿದ್ದಾರೆ. ಆದರೆ, ಸಮುದಾಯ ಭವನ ನಿರ್ಮಿಸಿಲ್ಲ.ಗ್ರಾಪಂ ಅಧಿಕಾರಿಗಳು ಸಮುದಾಯ ಭವನವಿದೆ ಎಂದು ಉತಾರ ನೀಡಿದ್ದಾರೆ. ಸಮುದಾಯ ಭವನ ಕಳೆದಿದೆ ಎಂದು ಜೂ. 11 ರಂದು ನಿತಿನ್ ದೊಡ್ಡಣ್ಣವರ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಮರಳಿ ಜೂ.14 ರಂದು ರಾಷ್ಟ್ರಪತಿಗಳ ಕಾರ್ಯಾಲಯದಿಂದ ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳಿ ಎಂದು ಪತ್ರ ಬಂದಿದೆ. ಸರ್ಕಾರ, ಜಿಲ್ಲಾಡಳಿತ ಯಾವುದೇ ರೀತಿ ಸ್ಪಂದಿಸದೇ ಇರುವುದಕ್ಕಾಗಿ ಗ್ರಾಪಂ ನೀಡಿರುವ ದಾಖಲಾತಿಗಳ ಸಮೇತ ಜೂ. 24 ರಂದು ಪುನಃ ರಾಷ್ಟ್ರಪತಿಗೆ ಮೇಲ್ ಮಾಡಲಾಗಿದೆ. ಜೂ.28 ರಂದು ಮತ್ತೆ ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದೆ.
ಗ್ರಾಪಂ ದಾಖಲಾತಿಗಳನ್ನು ಪರಿಶೀಲಿಸಿದಾಗ ದೊಡ್ಡಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ, ಆ ಸ್ಥಳದಲ್ಲಿ ಸಮುದಾಯ ಭವನಗಳು ಕಾಣಸಿಗುತ್ತಿಲ್ಲ. ಹೀಗಾಗಿ ನಾಪತ್ತೆಯಾಗಿರುವ ಸಮುದಾಯ ಭವನ ಹುಡುಕಿಕೊಡಿ, ಅಲ್ಲದೇ, ರೋಣ ತಹಸೀಲ್ದಾರ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸಿಎಂ ಕಚೇರಿ ಸೇರಿದಂತೆ ರಾಷ್ಟ್ರಪತಿಗಳಿಗೂ ಮನವಿ ಮಾಡಲಾಗಿದೆ. ರಾಷ್ಟ್ರಪತಿಗಳ ಕಾರ್ಯಾಲಯದಿಂದ ಸಮುದಾಯ ಭವನದ ದೂರು ಕುರಿತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ, ಈವರೆಗೆ ರಾಜ್ಯ ಸರ್ಕಾರ, ಜಿಲ್ಲಾಮಟ್ಟದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ನಿತಿನ್ ದೊಡ್ಡಣ್ಣವರ ತಿಳಿಸಿದ್ದಾರೆ.ಸವಡಿ ಗ್ರಾಮದ ದೊಡ್ಡಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಅಲ್ಲಿ ಯಾವುದೇ ಸಮುದಾಯ ಭವನ ನಿರ್ಮಾಣವಾಗಿಲ್ಲ. ಬಿಡುಗಡೆಯಾದ ಅನುದಾನದಲ್ಲಿ ದೇವಸ್ಥಾನದ ಸುತ್ತಲೂ ಗೋಡೆ ನಿರ್ಮಿಸಿ, ಸ್ಲ್ಯಾಬ್ ಹಾಕಿದ್ದೇವೆ ಎಂದು ಟ್ರಸ್ಟ್ ನವರು ಹೇಳುತ್ತಾರೆ. ಈ ಕುರಿತು ಸಮಗ್ರ ವರದಿ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ಕಂದಾಯ ನಿರೀಕ್ಷಕ ಎ.ವೈ. ಹಾದಿಮನಿ ಹೇಳಿದ್ದಾರೆ.