ಆಸ್ತಿ ಪರಭಾರೆ ವಿವಾದ ಯಜಮಾನರಿಗೆ ಜವಾಬ್ದಾರಿ

KannadaprabhaNewsNetwork | Published : Jul 7, 2024 1:17 AM

ಸಾರಾಂಶ

ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಗಡಿಮನೆ, ಕಟ್ಟೆ ಮನೆ ಯಜಮಾನರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಪರಭಾರೆ ಹಾಗೂ ಆಡಳಿತ ಮಂಡಳಿಯ ವಿಚಾರವಾಗಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ತಾಲೂಕಿನ ಗಡಿ ಮನೆ, ಕಟ್ಟೆ ಮನೆ ಯಜಮಾನರಿಗೆ ಸಂಪೂರ್ಣ ಜವಾಬ್ದಾರಿ ವಹಿಸಲು ಸೌಹಾರ್ದ ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಅಂಬೇಡ್ಕರ್ ಭವನದಲ್ಲಿ ಶನಿವಾರ ಅಂಬೇಡ್ಕರ್ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ತಾಲೂಕಿನ ಗಡಿಮನೆ, ಕಟ್ಟೆ ಮನೆ ಯಜಮಾನರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಹಾಗೂ ಯಜಮಾನರು ಮಾತನಾಡಿ, ಸಮಾಜದ ಆಸ್ತಿ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಮತ್ತು ಆಸ್ತಿ ಸಂರಕ್ಷಣಾ ಸಮಿತಿ ನಡುವೆ ನಡೆಯುತ್ತಿರುವ ತಿಕ್ಕಾಟದಿಂದ ದಲಿತ ಸಮುದಾಯವೇ ತಲೆ ತಗ್ಗಿಸುವಂತಾಗಿದೆ. ಪ್ರತಿ ದಿನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆಯು ನಡೆಯುತ್ತಿದೆ. ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿಯನ್ನು ಪರಭಾರೆ ಮಾಡಿರುವವರಿಗೆ ಶಿಕ್ಷೆಯಾಗಲಿ. ಜೊತೆಗೆ ನ್ಯಾಯಾಲಯ ಇದರ ಬಗ್ಗೆ ಆದೇಶ ನೀಡುತ್ತದೆ. ಅದನ್ನು ನಾವೆಲ್ಲರು ಪಾಲಿಸೋಣ, ಗೌರವಿಸೋಣ. ಆದರೆ, ಆದಿ ಕರ್ನಾಟಕ ಅಭಿವೃದ್ದಿ ಸಂಘದ ವಿಚಾರದಲ್ಲಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಮೇಲೆ ಗೂಬೆ ಕೂರಿಸುವ ಮತ್ತು ಅವರನ್ನು ಅಪರಾಧಿಗಳನ್ನಾಗಿ ಮಾಡುವ ಷಡ್ಯಂತರ ನಡೆಯುತ್ತಿದೆ. ಇದರಿಂದ ಬಹಳ ವರ್ಷಗಳಿಂದ ಅಧ್ಯಕ್ಷರಾಗಿ ಆಸ್ತಿಯನ್ನು ಸಂರಕ್ಷಣೆ ಮಾಡಿಕೊಳ್ಳುವ ಜೊತೆಗೆ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಹಿರಿಯ ನಂಜುಂಡಸ್ವಾಮಿ ಅವರಿಗೆ ಅಗೌರವ ತರುವಂತಹ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು.

ಒಂದೇ ಸಮುದಾಯದ ನಾವುಗಳ ಕಿತ್ತಾಡಿಕೊಂಡು ದೂರುವುದರಿಂದ ಯಾವುದೇ ಲಾಭ ವಿಲ್ಲ. ಇತರೇ ಮುಂದುವರಿದ ಸಮುದಾಯಗಳನ್ನು ನೋಡಿ ಬುದ್ದಿ ಕಲಿಯುವುದು ಬಹಳ ಇದೆ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೆ ಇತಿಶ್ರೀ ಹಾಡುವ ಉದ್ದೇಶದಿಂದ ತಾಲೂಕಿನ ಗಡಿ ಮನೆ, ಕಟ್ಟೆ ಮನೆಗಳ ಯಜಮಾನರಿಗೆ ಸಂಪೂರ್ಣ ಜವಾಬ್ಧಾರಿ ವಹಿಸಸಲು ಸಭೆ ಒಕ್ಕೊರಲಿನಿಂದ ಚರ್ಚೆಸಿ ಒಪ್ಪಿಗೆ ಸೂಚಿಸಲಾಯಿತು. ಇದನ್ನು ಚಾಲ್ತಿಗೆ ತರಲು ಚಾ.ನಗರ ಗಡಿ ಮನೆ ಯಜಮಾನರಿಗೆ ವಹಿಸಲು ಸಭೆಯಲ್ಲಿದ್ದ ಮುಖಂಡರು ತಿಳಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕ ಜಿಪಂ ಮಾಜಿ ಸದಸ್ಯ ಎಸ್.ಮಹದೇವಯ್ಯ, ಮರಿಯಾಲಹುಂಡಿ ಯಜಮಾನ ಎಂ.ಎಸ್. ಮಾದಯ್ಯ, ಅಂಬೇಡ್ಕರ್ ಸಂಘಗಳ ಒಕ್ಕುಟದ ಅಧ್ಯಕ್ಷ ಸಿ.ಕೆ. ಮಂಜುನಾಥ್, ಯಜಮಾನರಾದ ಹೊಂಗನೂರು ನಾಗಯ್ಯ, ನಲ್ಲೂರು ಪರಮೇಶ್ವರ್, ಉಡಿಗಾಲ ಕೊಂಗಳ್ಳಿ ಮಹದೇವ್, ಚಾ.ನಗರ ಮಾಧು, ನಾಗರಾಜು, ಚನ್ನಂಜಯ್ಯ, ಸೋಮವಾರಪೇಟೆ ಮಾಜಿ ನಗರಸಭಾ ಸದಸ್ಯ ಮಹದೇವಯ್ಯ, ಪುಟ್ಟಸ್ವಾಮಿ, ಬಸವರಾಜು, ಅಂಬೇಡ್ಕರ್ ಸೇನೆ ಅಧ್ಯಕ್ಷ ಗಣೇಶ್ ಪ್ರಸಾದ್, ಮೂಕಹಳ್ಳಿ ಜಯಶಂಕರ್, ಎಸ್.ಪಿ. ಮಹೇಶ್ ಸಮುದಾಯದ ಮುಖಂಡರು ಭಾಗವಹಿಸಿದ್ದರು.

Share this article