ಕಲಿಕೆಗೆ ಗ್ರಂಥಾಲಯಗಳು ಸಹಕಾರಿ: ಸೋಮಶೇಖರ್‌

KannadaprabhaNewsNetwork | Published : Jan 19, 2024 1:46 AM

ಸಾರಾಂಶ

ಗ್ರಾಮಮಟ್ಟದಲ್ಲಿ ತೆರೆಯಲಾಗಿರುವ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.

ಚಿತ್ರದುರ್ಗ: ಗ್ರಾಮಮಟ್ಟದಲ್ಲಿ ತೆರೆಯಲಾಗಿರುವ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಭಾಗದ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಮಯದಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದವು. ವಿದ್ಯಾರ್ಥಿಗಳು ಸಾಕಷ್ಟು ಕಲಿಕಾ ಅಂತರ ಅನುಭವಿಸಿದ್ದರು. ಉನ್ನತ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ವೃತ್ತಿ ಮಾರ್ಗದರ್ಶನ ಕೊರತೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಸಮುದಾಯದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಇವರೆಲ್ಲರಿಗೂ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಗೆ ಅವಕಾಶ ಮಾಡಿಕೊಳ್ಳಲಾಗಿತ್ತು. ಈ ರೀತಿ ಗ್ರಾಮೀಣ ಗ್ರಂಥಾಲಯಗಳನ್ನು ಕಲಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿತ್ತು. ಇದೇ ಮಾದರಿಯಲ್ಲಿ ಇಂಡಿಯಾ ಲಿಟರಸಿ ಪ್ರಾಜೆಕ್ಟ್ ಹಾಗೂ ಡೆಲ್ ಟೆಕ್ನಾಲಜಿ ಹಾಗೂ ಪಂಚಾಯಿತಿ ರಾಜ್ ಇಲಾಖೆ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ವೃತ್ತಿ ಮಾರ್ಗದರ್ಶನದ ಅರಿವು ಮೂಡಿಸಲು ಕಾರ್ಯಗಾರ ಏರ್ಪಡಿಸಲಾಗಿದೆ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ವೃತ್ತಿ ಮಾರ್ಗದರ್ಶನ ಹಾಗೂ ಉನ್ನತ ವ್ಯಾಸಂಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಂಪನ್ಮೂಲ ಗ್ರಾಮ ಪಂಚಾಯತಿಗಳಲ್ಲಿ ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಮಾಡಲಿಂಗ್, ಜಾಹೀರಾತು, ಕೃಷಿ ಮತ್ತು ತೋಟಗಾರಿಕ, ವಿಜ್ಞಾನ, ವಾಸ್ತುಶಿಲ್ಪಿ ಹಣಕಾಸು, ಕಾಲ್ ಸೆಂಟರ್ ಏಜೆಂಟ್, ನಾಗರೀಕ ಸೇವೆ, ಆಹಾರ ತಜ್ಞರು, ಪರಿಸರ ತಜ್ಞರು, ಮಾರಾಟ, ಛಾಯಾಗ್ರಾಹಕರು, ವಸ್ತು ಸಂಗ್ರಾಲಯ ತಜ್ಞರು, ಶಿಕ್ಷಕರು, ಪತ್ರಿಕೋದ್ಯಮಿ, ಹೋಟೆಲ್ ನಿರ್ವಾಹಕರು ಹಾಗೂ ವಿನ್ಯಾಸಕಾರರು ಇನ್ನು ಮುಂತಾದ ವೃತ್ತಿಗಳ ಬಗ್ಗೆ ಗ್ರಾಮೀಣ ಗ್ರಂಥಪಾಲಕರಿಗೆ ತರಬೇತಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರಿಯರ್ ಪ್ಲಾನರ್ ಕನ್ನಡ ಆವೃತ್ತಿ ಪುಸ್ತಕ ಬಿಡುಗಡೆಗೊಳಿಸಿದರು. ಜಿ.ಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಮುಖ್ಯ ಗ್ರಂಥಾಲಯ ಅಧಿಕಾರಿಗಳು ಪಿ.ಆರ್.ತಿಪ್ಪೇಸ್ವಾಮಿ, ಸುಮ ಕೋಡಿಹಳ್ಳಿ, ಇಂಡಿಯಾ ಲಿಟರಸಿ ಪ್ರಾಜೆಕ್ಟ್ ಮ್ಯಾನೇಜರ್ ರೋಹಿಣಿ, ತಾಂತ್ರಿಕ ಸಂಯೋಜಕ ಅವಿನಾಶ್ ಹಾಗೂ ಶಿಬಿರಾರ್ಥಿಗಳು ಇದ್ದರು.

Share this article