ಗ್ರಂಥಾಲಯಗಳು ಜ್ಞಾನದ ಭಂಡಾರ: ಡಾ. ಅನ್ನದಾನೀಶ್ವರ ಶ್ರೀ

KannadaprabhaNewsNetwork |  
Published : Aug 13, 2026, 02:15 AM IST
ಕಾರ್ಯಕ್ರಮದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಕಾಲೇಜಿನ ಗ್ರಂಥಾಲಯದಲ್ಲಿ ಪ್ರಸ್ತುತ 33 ಸಾವಿರಕ್ಕೂ ಹೆಚ್ಚು ಮೌಲ್ಯಯುತ ಗ್ರಂಥಗಳ ಸಂಗ್ರಹವಿದೆ. ಕಾಲೇಜು ಪ್ರಾರಂಭವಾದಾಗಿನಿಂದಲೂ ಗ್ರಂಥಾಲಯವನ್ನು ಸತತವಾಗಿ ಅಭಿವೃದ್ಧಿಪಡಿಸಿಕೊಂಡು ಬರಲಾಗಿದೆ.

ಮುಂಡರಗಿ: ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ, ಅವು ಜ್ಞಾನದ ಭಂಡಾರಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಕರೆ ನೀಡಿದರು.ಬುಧವಾರ ಪಟ್ಟಣದ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೊತ್ತರ ಅಧ್ಯಯನ ವಿಭಾಗಗಳ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಗ್ರಂಥ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಜನ್ಮದಿನೋತ್ಸವದ ಪ್ರಯುಕ್ತ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾಲೇಜಿನ ಗ್ರಂಥಾಲಯದಲ್ಲಿ ಪ್ರಸ್ತುತ 33 ಸಾವಿರಕ್ಕೂ ಹೆಚ್ಚು ಮೌಲ್ಯಯುತ ಗ್ರಂಥಗಳ ಸಂಗ್ರಹವಿದೆ. ಕಾಲೇಜು ಪ್ರಾರಂಭವಾದಾಗಿನಿಂದಲೂ ಗ್ರಂಥಾಲಯವನ್ನು ಸತತವಾಗಿ ಅಭಿವೃದ್ಧಿಪಡಿಸಿಕೊಂಡು ಬರಲಾಗಿದೆ ಎಂದರು.

ಕಾಲೇಜು ಗ್ರಂಥಾಲಯ ಮಾತ್ರವಲ್ಲದೆ, ಅನ್ನದಾನೀಶ್ವರ ಗ್ರಂಥಾಲಯದಲ್ಲೂ ಸುಮಾರು 15 ಸಾವಿರಕ್ಕೂ ಹೆಚ್ಚು ಅಪರೂಪದ ಹಾಗೂ ಜ್ಞಾನವರ್ಧಕ ಗ್ರಂಥಗಳನ್ನು ಸಂಗ್ರಹಿಸಲಾಗಿದೆ. ಜ್ಞಾನಕ್ಕಿಂತ ಪವಿತ್ರವಾದದ್ದು ಬೇರೊಂದಿಲ್ಲ. ಜ್ಞಾನವೇ ಪವಿತ್ರವಾದುದು. ಜ್ಞಾನವಂತನಿಗೆ ವಿದ್ವಾಂಸನಿಗೆ ಎಲ್ಲೆಡೆಯೂ ಗೌರವ ಸಿಗುತ್ತದೆ. ಕೇವಲ ಪದವಿ ಪ್ರಮಾಣಪತ್ರಗಳನ್ನು ಪಡೆಯುವುದಷ್ಟೇ ಶಿಕ್ಷಣದ ಉದ್ದೇಶವಾಗಬಾರದು, ನಿಜವಾದ ಜ್ಞಾನಾರ್ಜನೆ ಮಾಡಬೇಕು ಎಂದರು.ಪುಣೆಯ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿಯ ನಿವೃತ್ತ ಗ್ರಂಥಾಲಯ ಅಧಿಕಾರಿ ಡಾ. ಸಂಗಯ್ಯ ಶಿರೂರಮಠ ಮಾತನಾಡಿ, ಗ್ರಂಥಾಲಯಗಳು ಜ್ಞಾನವನ್ನು ರಕ್ಷಿಸುವ ಮತ್ತು ಸಮಾಜಕ್ಕೆ ನಿರಂತರವಾಗಿ ಜ್ಞಾನ ಸೇವೆ ಒದಗಿಸುವ ಪವಿತ್ರ ಸಂಸ್ಥೆಗಳಾಗಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಅಮೂಲ್ಯವಾದ ಸಮಯವನ್ನು ಗ್ರಂಥಾಲಯಗಳಲ್ಲಿ ಕಳೆದು, ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರಿಯನ್ನು ತಲುಪಲು ನಿರಂತರ ಓದುವ ಅಭ್ಯಾಸ ಹೊಂದಿರಬೇಕು ಎಂದರು.

ಕಾಲೇಜು ಮೇಲ್ವಿಚಾರಣಾ ಸಮೀತಿ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿ ವಿಷಯ. ಮೊಬೈಲ್ ಬಳಕೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪುಸ್ತಕಗಳ ಸಂಗ್ರಹಣೆ ಹಾಗೂ ಓದಿಗೆ ನೀಡಬೇಕು ಎಂದರು.

ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ಎಫ್. ಗುಡದಪ್ಪನವರ, ಎಂ.ಜಿ. ಗಚ್ಚಣ್ಣವರ, ತಿಮ್ಮಪ್ಪ ದಂಡೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾ. ಡಾ. ಸಂತೋಷ ಹಿರೇಮಠ ಸ್ವಾಗತಿಸಿ, ಪ್ರೊ. ಲತಾ ಕಡ್ಡಿ ನಿರೂಪಿಸಿ, ಮಹಾಂತೇಶ ಹೊಸಕೇರಿಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 15ರಿಂದ ಜಾಬ್‌ ಕಾರ್ಡ್‌ ಮೇಳ, ವಿಶೇಷ ಜಾಗೃತಿ ಅಭಿಯಾನ
ಬಿಸಿಯೂಟದಲ್ಲಿ ಸ್ವಚ್ಛತೆ ನಿರ್ಲಕ್ಷ್ಯ: ತಹಸೀಲ್ದಾರ್‌ ಬೇಸರ