ಮಾತಿನಲ್ಲಿ ಕರುಣೆಯಿದ್ದರೆ ಬದುಕು ಬದಲಾಗಲು ಸಾಧ್ಯ: ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ

KannadaprabhaNewsNetwork |  
Published : Mar 19, 2026, 02:15 AM IST
ಚಿತ್ರ 16 ಜಿಟಿಎಲ್ 1 | Kannada Prabha

ಸಾರಾಂಶ

ಗುತ್ತಲ ಸಮೀಪದ ನೆಗಳೂರ ಗ್ರಾಮದಲ್ಲಿ ಜರುಗುತ್ತಿರುವ ಶ್ರೀಮಠದ ಜಾತ್ರಾಮಹೋತ್ಸವದ ಧರ್ಮ ಸಮಾರಂಭದಲ್ಲಿ ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಗುತ್ತಲ: ನಾವು ಆಡುವ ಮಾತುಗಳಿಗೆ ಕೊಲ್ಲುವ ಶಕ್ತಿ ಮತ್ತು ಕಾಪಾಡುವ ಸಾಮರ್ಥ್ಯವೂ ಇದೆ. ಮಾತುಗಳಲ್ಲಿ ಕರುಣೆ ಮತ್ತು ನೈಜತೆಯಿದ್ದರೆ ನಮ್ಮ ಬದುಕು ಬದಲಾಗುವುದರಲ್ಲಿ ಸಂಶಯವಿಲ್ಲ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಸಮೀಪದ ನೆಗಳೂರ ಗ್ರಾಮದಲ್ಲಿ ಜರುಗುತ್ತಿರುವ ಶ್ರೀಮಠದ ಜಾತ್ರಾಮಹೋತ್ಸವದ ಧರ್ಮ ಸಮಾರಂಭದಲ್ಲಿ ಇತ್ತೀಚೆಗೆ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬ ಮನುಷ್ಯನಲ್ಲಿ ಅದ್ಭುತವಾದ ಸಾಮರ್ಥ್ಯ ಅಡಕವಾಗಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಬಾಳಿದರೆ ಜೀವನ ಉತ್ತುಂಗಕ್ಕೇರುವುದರಲ್ಲಿ ಯಾವ ಸಂಶಯವೂ ಇಲ್ಲ, ಜೀವನದಲ್ಲಿ ಒಳಿತು ಕಾರ್ಯಮಾಡಲು ಅವಕಾಶ ಸಿಕ್ಕಾಗ ಸದುಪಯೋಗ ಮಾಡಿಕೊಂಡರೆ ಜೀವನ ಪಾವನವಾಗುವುದು ಎಂದರು.ಪ್ರವಚನಕಾರ ಪುಟ್ಟರಾಜ ಶಾಸ್ತ್ರಿಜೀ ಮಾತನಾಡಿ, ಜೀವನದಲ್ಲಿ ಗುರಿ ಮತ್ತು ಗುರುವಿನ ಪಾತ್ರ ಬಹಳಷ್ಟಿದೆ. ಗುರಿ ಮುಟ್ಟಲೇಬೇಕೆಂಬ ದೃಢ ನಿರ್ಧಾರ ಜತೆಗಿದ್ದರೆ ಸೋಲು ನಮ್ಮ ಸಮೀಪ ಸುಳಿಯುವುದಿಲ್ಲ. ಅದಕ್ಕೆ ಸದ್ಗುರುವಿನ ಮಾರ್ಗದರ್ಶನ ಸಿಕ್ಕಾಗ ಗುರಿ ಮುಟ್ಟುವುದು ಸುಲಭವಾಗುವುದು, ಉತ್ತಮ ಸಂಸ್ಕಾರ ಒಂದಿದ್ದರೆ ಸಂಪೂರ್ಣ ಜಗತ್ತನ್ನು ಗೆಲ್ಲಬಹುದು. ಅಹಂಕಾರ ಒಂದಿದ್ದರೆ ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು, ಗುರುಶಾಂತ ಶಿವಯೋಗಿಗಳು ಹಲವು ನೈಜ ಪವಾಡಗಳ ಮೂಲಕ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ನೀಗಿಸಿದರು ಎಂದರು.ಕಾರ್ಯಕ್ರಮದಲ್ಲಿ ಹುಡಗಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಹಾಪುರ ಹಿರೇಮಠದ ನಿಜಗುಣದೇವರು ಸೇರಿದಂತೆ ಹಾಲಗಿ, ಕೊರಡೂರು, ಕೋಗನೂರ, ನೆಗಳೂರ ಗ್ರಾಮಗಳ ಸದ್ಭಕ್ತರಿದ್ದರು. ಇದೇ ಸಂದರ್ಭದಲ್ಲಿ ನೆಗಳೂರಿನ ಹಾಲು ಉತ್ಪಾದಕರ ಸಂಘ ಹಾಗೂ ಗುರುಶಾಂತೇಶ್ವರ ಮಹಿಳಾ ಬಳಗದ ವತಿಯಿಂದ ಲಿಂ. ಶಿವಾನಂದ ಶಿವಾಚಾರ್ಯರ ಮೂರ್ತಿಯ ತುಲಾಭಾರ ನೆರವೇರಿಸಿದರು. ನೆಗಳೂರ ಹಾಲು ಉತ್ಪಾದಕರ ಸಂಘದ ವತಿಯಿಂದ ದಾಸೋಹ ಸೇವೆ ಜರುಗಿತು. ಶಿವಲಿಂಗಯ್ಯ ಗವಾಯಿ ಹಿರೇಮಠ ಬಿಳೇಬಾಳ ಮತ್ತು ಅಡಿವೇಶಕುಮಾರ ಬೆಳಗಾವಿ ಸಂಗೀತ ಕಾರ್ಯಕ್ರಮ, ಗ್ರಾಮದ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗುರುಶಾಂತಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಯುಗಾದಿಯ ಸಂಭ್ರಮ: ಆದರೆ ಕೂಡ್ಲಿಗಿಯಲ್ಲಿ ಸೂತಕದ ಛಾಯೆ!
ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್