ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು:
ಮಾತುಗಳಿಗೆ ಕೊಲ್ಲುವ ಶಕ್ತಿ ಮತ್ತು ಕಾಪಾಡುವ ಸಾಮರ್ಥ್ಯವೂ ಇದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ನಮ್ಮ ಬದುಕು ಬದಲಾಗುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲು ಇಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗೆ ಶ್ರಮಿಸಬೇಕಾಗಿದೆ. ಮನುಷ್ಯನಲ್ಲಿ ಅದ್ಭುತ ಶಕ್ತಿಯಿದೆ. ಬೀಜದಿಂದ ವೃಕ್ಷ ಬೆಳೆಯುತ್ತದೆ. ಸುಂದರ ಹೂ ರುಚಿಯಾದ ಹಣ್ಣು ಕೊಡುತ್ತದೆ. ನೆರಳು ಮತ್ತು ಶುದ್ಧ ಗಾಳಿಯನ್ನು ಸಹ ಕೊಡುತ್ತದೆ. ಮನುಷ್ಯನಲ್ಲಿರುವ ಸಾಮರ್ಥ್ಯ ಸದ್ಬಳಕೆ ಮಾಡಿ ಕೊಂಡು ಬಾಳಿದರೆ ಜೀವನ ಉತ್ತುಂಗಕ್ಕೇರುವುದರಲ್ಲಿ ಯಾವ ಸಂಶಯ ಇಲ್ಲ ಎಂದರು.ನೀರಿಗಿಂತ ತಿಳಿಯಾದದ್ದು ಜ್ಞಾನ, ಭೂಮಿಗಿಂತ ಭಾರವಾದದ್ದು ಪಾಪ, ಕಾಡಿಗೆಗಿಂತ ಕಪ್ಪಾಗಿರುವುದು ಕಳಂಕ, ಸೂರ್ಯನಿ ಗಿಂತ ಪ್ರಖರವಾದದ್ದು ಕೋಪ, ಮಂಜಿಗಿಂತ ಹಗುರವಾದದ್ದು ಪುಣ್ಯ, ಗಾಳಿಗಿಂತ ವೇಗವಾಗಿರುವುದು ಮನಸ್ಸು ಇವುಗಳನ್ನು ಅರಿತು ಬಾಳಿದರೆ ಬದುಕು ಸಾರ್ಥಕ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದನ್ನು ಯಾರೂ ಮರೆಯಲಾಗದ ಎಂದರು.ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಗುರಿ ಮುಟ್ಟಲೇಬೇಕೆಂಬ ದೃಢ ನಿರ್ಧಾರ ಜೊತೆಗಿದ್ದರೆ ಸೋಲು ನಮ್ಮ ಸಮೀಪ ಸುಳಿಯಲು ಹಿಂಜರಿ ಯುತ್ತದೆ. ಕಾಲ ಕೆಟ್ಟಿತೆಂದು ಕೆಲವರು ಹೇಳುತ್ತಾರೆ. ಆದರೆ ಕಾಲ ಕೆಡುವುದಿಲ್ಲ. ಕೆಟ್ಟಿರುವುದು ಜನರ ನಡತೆ ಮತ್ತು ಆಚಾರ ವಿಚಾರ ಎಂದು ನೆನಪಿಡಬೇಕಾಗುತ್ತದೆ. ಸಂಸ್ಕಾರ ಒಂದಿದ್ದರೆ ಸಂಪೂರ್ಣ ಜಗತ್ತನ್ನು ಗೆಲ್ಲಬಹುದು ಅಹಂಕಾರ ಒಂದಿದ್ದರೆ ಗೆದ್ದ ಜಗತ್ತನ್ನು ಕಳೆದುಕೊಳ್ಳಬಹುದು. ಚುಚ್ಚುವುದು ಸೂಜಿ ಗುಣ. ಆದರೆ ದಾರದ ಜೊತೆ ಗೆಳೆತನ ಮಾಡಿದ ಮೇಲೆ ಸೂಜಿ ಬದಲಾಗಿ ಎಲ್ಲವನ್ನು ಜೋಡಿಸಲು ಮುಂದಾಗುತ್ತದೆ. ಒಳ್ಳೆಯತನ ಜೊತೆಗಿದ್ದರೆ ಒಳ್ಳೆಯದೇ ಆಗುವುದೆಂದು ಮಹಾ ಮಾನವತಾವಾದಿ ಶ್ರೀ ಜಗದ್ಗುರು ರೇಣುಕಾ ಚಾರ್ಯರು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ ಎಂದರು.ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ತಡವಲಗಾ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಂಸ್ಕೃತ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಶ್ರೀ ಜಗದ್ಗುರು ಶಿವಾನಂದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಶ್ರೀ ರಂಭಾಪುರಿ ಜಗದ್ಗುರು ಅಂಕಪಟ್ಟಿ ವಿತರಿಸಿ ಶುಭ ಹಾರೈಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ಶಿಕ್ಷಕ ವೀರೇಶ ಕುಲಕರ್ಣಿ ಮತ್ತಿತರರು ಇದ್ದರು. ೧೧ಬಿಹೆಚ್‌ಆರ್ ೩:
ಬಾಳೆಹೊನ್ನೂರು ರಂಭಾಪುರಿ ಪೀಠದ ಸಂಸ್ಕೃತ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಶ್ರೀ ಜಗದ್ಗುರು ಶಿವಾನಂದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಶ್ರೀ ರಂಭಾಪುರಿ ಜಗದ್ಗುರು ಅಂಕಪಟ್ಟಿ ವಿತರಿಸಿ ಶುಭ ಹಾರೈಸಿದರು.