ಹಾನಗಲ್ಲ: ಭವಿಷ್ಯದ ಪೀಳಿಗೆಗೆ ಬದುಕಿನ ಶಿಕ್ಷಣ ಅತ್ಯವಶ್ಯವಾಗಿದ್ದು, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಬುದ್ಧಿ ಮನಸ್ಸು ಶಾರೀರಿಕ ಸೌಖ್ಯ ಕಾಯ್ದುಕೊಳ್ಳುವುದು ತೀರ ಅಗತ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ತಿಳಿಸಿದರು.ಸೋಮವಾರ ಕುಮಾರೇಶ್ವರ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ದಾರಿ ಬದಲಾಗುತ್ತಿದೆ. ಕೇವಲ ಪಠ್ಯಾಧಾರಿತ ಬೋಧನೆಯನ್ನು ಮನನ ಮಾಡುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಎಂದರು.
ಉತ್ತಮ ಸಂಸ್ಕಾರಕ್ಕಾಗಿ ಸಾಂಸ್ಕೃತಿಕ ಚಟುವಟಿಕೆಗಳು, ಶಾರೀರಿಕ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳು ಅತ್ಯಂತ ಅವಶ್ಯ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ನೆಪದಲ್ಲಿ ವಿದ್ಯಾರ್ಥಿಗಳು ಬುದ್ಧಿಗೆ ಹೆಚ್ಚು ಮಾನ್ಯತೆ ನೀಡುತ್ತಿರುವುದು, ಆರೋಗ್ಯದ ಕಡೆಗೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ ಎಂದರು.ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಕ್ರೀಡೆ ಅತ್ಯಂತ ಅವಶ್ಯವಾದ ಶಿಕ್ಷಣವಾಗಿದೆ. ಪುರಾತನ ಕಾಲದಿಂದ ಮಕ್ಕಳು ಯುವಕರಿಗೆ ಹಲವು ಜಾನಪದ ಆಟಗಳ ಮೂಲಕ ಶಾರೀರಿಕ ಹಾಗೂ ಬೌದ್ಧಿಕ ಶಿಕ್ಷಣ ಲಭ್ಯವಾಗುತ್ತಿತ್ತು. ಆದರೆ ಈಗ ಕೇವಲ ಶಾರೀರಿಕ ಶ್ರಮವೇ ಇಲ್ಲದ ಮೊಬೈಲ್ ಆಟಗಳು ಆರಂಭವಾಗಿರುವುದು ಆರೋಗ್ಯ ಹಾಗೂ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾ ಬೀರುತ್ತಿವೆ. ಇದು ನಾಳಿನ ಪೀಳಿಗೆ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರು ಸಾಧ್ಯತೆ ಇದೆ. ದೇಶದ ಸತ್ಪ್ರಜೆಗಳಾಗಿ ಬೆಳೆದು ದೇಶ ಕಾಯುವ, ದೇಶಕ್ಕಾಗಿ ದುಡಿಯುವ ದೂರದೃಷ್ಟಿಯ ಶಿಕ್ಷಣವೂ ಬೇಕಾಗಿದೆ ಎಂದರು.ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ಸದಸ್ಯರಾದ ಬಿ.ಎಸ್. ಅಕ್ಕಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎ.ಎಸ್. ಬಳ್ಳಾರಿ, ರಾಜಶೇಖರ ಸಿಂಧೂರ, ಶಿವಯೋಗಿ ಸವದತ್ತಿ, ಬಸವರಾಜ ಎಲಿ, ಪ್ರಾಚಾರ್ಯ ಚಿರಂಜೀವಿ ಆಡೂರ, ಡಿ.ಎಸ್. ಗಂಟೇರ ವೇದಿಕೆಯಲ್ಲಿದ್ದರು. ಗೋಪಾಲ ಹುನಗನಹಳ್ಳಿ ಸ್ವಾಗತಿಸಿದರು. ಉಮೇಶ ನಂದಿಕೊಪ್ಪ ನಿರೂಪಿಸಿ, ವಂದಿಸಿದರು.