ಕನ್ನಡಪ್ರಭ ವಾರ್ತೆ ದಾವಣಗೆರೆ
ಚನ್ನಗಿರಿ ತಾಲೂಕಿನ ಕಶೆಟ್ಟಿಹಳ್ಳಿ ಗ್ರಾಮದಲ್ಲಿ ಬುಧವಾರ ಜಗದ್ಗುರು ರೇವಣಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಳ್ಳೆಯ ಮಾತು ಮತ್ತು ಒಳ್ಳೆಯ ಆಚರಣೆಯಲ್ಲಿ ಬದುಕನ್ನು ಪರಿವರ್ತಿಸುವ ಶಕ್ತಿಯಿದೆ. ಧರ್ಮ ಎಂದರೆ ಉತ್ತಮ ನಡವಳಿಕೆ ಎಂದರ್ಥ. ಅರಿತು ಆಚರಿಸಿ ಬಾಳುವುದರಿಂದ ಬದುಕಿನಲ್ಲಿ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ. ಮಾನವೀಯ ಮೌಲ್ಯಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಂಸ್ಕಾರ ಸದ್ವಿಚಾರಗಳನ್ನು ಮನವರಿಕೆ ಮಾಡಿಕೊಡುವ ಅವಶ್ಯಕತೆಯಿದೆ. ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂಹಿತೆಯಲ್ಲಿ ದಶ ಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ದೇವಾಲಯಗಳು ಶ್ರದ್ಧಾ ಭಕ್ತಿ ಕೇಂದ್ರಗಳು. ದೇವಾಲಯದಲ್ಲಿ ಸ್ವಲ್ಪ ಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಾಮ ಚಿಕ್ಕದಾದರೂ ಹಮ್ಮಿಕೊಂಡ ಕಾರ್ಯಕ್ರಮ ದೊಡ್ಡದಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕು ಭಗವಂತ ಕೊಟ್ಟ ಕೊಡುಗೆ. ಬದುಕಿಗೆ ಬಲ ಮತ್ತು ಸಂಸ್ಕಾರ ಕೊಡುವುದು ಗುರುವಿನ ಧರ್ಮ. ಸತ್ಯ ಶುದ್ಧವಾದ ಕಾಯಕ ಜೀವನ ಶ್ರೇಯೋಭಿವೃದ್ಧಿಗೆ ಕಾರಣವಾಗುತ್ತದೆ. ಗ್ರಾಮದ ಎಲ್ಲ ಸದ್ಭಕ್ತರು ಒಗ್ಗಟ್ಟಿನಿಂದ ಕಾರ್ಯ ಮಾಡಿರುವುದು ತಮ್ಮಲ್ಲಿö ಅಡಗಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು.
ರೈತ ಮುಖಂಡ ತೇಜಸ್ವಿ ಪಟೇಲ ಮಾತನಾಡಿ, ಕಶೆಟ್ಟಿಹಳ್ಳಿ ಭಕ್ತಿಯ ಗ್ರಾಮ. ಇಲ್ಲಿರುವ ರೈತ ಸಮುದಾಯ ಶ್ರಮ ಜೀವಿಗಳು. ಗ್ರಾಮದ ಜನಸಂಖ್ಯೆ ಹೆಚ್ಚುತ್ತಿರುವುದರಿಂದ 12 ಎಕರೆ ಭೂಮಿಯಲ್ಲಿ ನಿವೇಶನ ವಿಂಗಡಿಸಿ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಕೊಡುವ ಯೋಜನೆ ಮಾಡುತ್ತೇವೆ ಎಂದರು.ರಾಮಘಟ್ಟ ರೇವಣಸಿದ್ಧೇಶ್ವರ ಶಿವಾಚಾರ್ಯರು, ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಹೊನ್ನಾಳಿ ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರಾಂಪುರ ಶಿವಕುಮಾರ ಹಾಲಸ್ವಾಮಿಗಳು, ದುಗ್ಗಾವತಿ ಹಿರೇಮಠದ ವೀರಭದ್ರ ಸ್ವಾಮೀಜಿ, ಕತ್ತಲಗೆರೆ ಬೃಹನ್ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕೆ.ಎಂ.ಮಂಜಪ್ಪ, ರಾಮಸ್ವಾಮಿ, ರುದ್ರಮ್ಮ, ಇತರ ಗಣ್ಯರು ಹಾಜರಿದ್ದರು.
ಮಠದ ಮಹಾರುದ್ರಯ್ಯ ಸ್ವಾಗತಿಸಿದರೆ ಶಿಕ್ಷಕ ಜಯಣ್ಣ ನಿರೂಪಿಸಿದರು.ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ಅನೇಕ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಜರುಗಿತು. ನಂತರ ದೇವತಾ ವಿಗ್ರಹ ಪ್ರತಿಷ್ಠಾಪನೆ ಮಾಡಿ ಭಕ್ತ ಸಮೂಹವನ್ನು ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.