ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗುರುವಾರ ರಾತ್ರಿ ನಡೆದಿದ್ದ ಕಲ್ಲು ತೂರಾಟ, ತಡರಾತ್ರಿ ತರಕಾರಿ ಕೈಗಾಡಿಗೆ ಬೆಂಕಿ ಹಚ್ಚಿದ ಪ್ರಕರಣದಿಂದ ಶುಕ್ರವಾರ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು ಸಭೆ ನಡೆಸಿ ಪ್ರತಿಭಟನೆ ಮುಂದಾಗಿದ್ದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿತ್ತು. ಶನಿವಾರ ಬೆಳಗ್ಗೆ ಎಂದಿನಂತೆ ಅಂಗಡಿ, ಮುಂಗಟ್ಟುಗಳು ತೆರೆದು, ವ್ಯಾಪಾರ ವಹಿವಾಟು ಆರಂಭವಾಯಿತು. ನಗರದಲ್ಲಿ ನಡೆದ ಗಲಭೆಗೆಯಿಂದಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರ ಸಂಖ್ಯೆ ಕಡಿಮೆ ಇತ್ತು.
ಶನಿವಾರವೂ ನಡೆಯಲಿಲ್ಲ ಶಾಂತಿ ಸಭೆ:ಶಿವಾಜಿ ಜಯಂತಿ ಮೇಳೆ ಕಿಲ್ಲಾ ಓಣಿಯ ಪ್ರಾರ್ಥನಾ ಮಂದಿರದಿಂದ ಕಲ್ಲು ತೂರಿ ಬಂದು ಉಂಟಾಗಿದ್ದ ಅಹಿತಕರ ಘಟನೆ ಬಳಿಕ ನಗರದಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಎರಡು ಕೋಮುಗಳ ಮುಖಂಡರ ಶಾಂತಿ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದರು. ಶುಕ್ರವಾರ ಕರೆದ ಶಾಂತಿ ಸಭೆಗೆ ಒಂದು ಕೋಮಿನ ಮುಖಂಡರು ಗೈರಾಗಿದ್ದರು, ಶನಿವಾರ ಕರೆದ ಶಾಂತಿಸಭೆಗೆ ಹಿಂದೂ ಮುಖಂಡರು ದೂರ ಉಳಿದರು. ಮುಸ್ಲಿಂ ಮುಖಂಡರು ಆಗಮಿಸಿದ್ದರಾದರೂ ಸಭೆ ನಡೆಯದ್ದರಿಂದ ಜಿಲ್ಲಾಧಿಕಾರಿ ಜೊತೆಗೆ ಕೆಲಕಾಲ ಚರ್ಚಿಸಿ ತೆರಳಿದರು.ಹಳೇ ಬಾಗಲಕೋಟೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ:
ಆ ಪ್ರದೇಶದಲ್ಲಿ 5ಕ್ಕೂ ಅಧಿಕ ಕೆಎಸ್ಆರ್‌ಪಿ ತುಕಡಿ, ನೂರಾರು ಪೊಲೀಸ್ ಕಾನ್ಸಟೇಬಲ್ ಗಳು, ಎಸ್ಪಿ, ಡಿಎಸ್ಪಿ, ಸಿಪಿಐ, ಪಿಎಸ್ಐ ಗಳನ್ನು ನಿಯೋಜಿಸಿದ್ದು, ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಠೋಡ ಅವರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಜೊತೆಗೆ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡುಬಂತು. ನಗರದಲ್ಲಿ ಒಟ್ಟು 750ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಗರದಲ್ಲಿ ನಡೆದ ಕಲ್ಲು ತೂರಾಟದ ಘಟನೆ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಜೊತೆಗೆ ಬಾಗಲಕೋಟೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿ ಹೋಗಿದ್ದ ರಿಷ್ಯಂತ್ ಹಾಗೂ ಅಮರನಾಥ ರೆಡ್ಡಿ ಅವರನ್ನು ಸಹ ಕರೆಸಿ ಭದ್ರತೆಗೆ ನಿಯೋಜಿಸಲಾಗಿದೆ. ಒಟ್ಟು ಐದು ಜನ ಎಸ್ಪಿಗಳು ನಗರದಲ್ಲಿ ತೀವ್ರ ನಿಗಾ ವಹಿಸಿದ್ದಾರೆ.
ಹಿಂದು ಕಾರ್ಯಕರ್ತ ಅಶೋಕ ಬಾರಕೇರ ಎಂಬ ಯುವಕ ಅಂಬೇಡ್ಕರ್ ಸರ್ಕಲ್ ಮೂಲಕ ಸಂಜೆ ನಡೆಯಲಿದ್ದ ಹಿಂದು ಸಮಾವೇಶದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ. ಈ ವೇಳೆ ಆತನನ್ನು ಗಮನಿಸಿದ ಪೊಲೀಸರು ಹಿಡಿಯಲು ಮುಂದಾಗಿದ್ದಾರೆ. ಆಗ ಅವರಿಂದ ತಪ್ಪಿಸಿಕೊಳ್ಳಲು ಓಡಿ ಹೋಗುವಾಗಿ ಬಿದ್ದು ಗಾಯಗೊಂಡಿ, ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಎಡಗೈ ಮುರಿದಿರುವುದು ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಭೇಟಿ ನೀಡಿದ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಸೇರಿ ಅನೇಕ ಮುಖಂಡರು ಆರೋಗ್ಯ ವಿಚಾರಿಸಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡ: ಶುಕ್ರವಾರ ಸಂಪೂರ್ಣ ಬಂದ್ ಆಗಿದ್ದ ವ್ಯಾಪಾರ ವಹಿವಾಟು ಶನಿವಾರ ಬೆಳಗ್ಗೆ ಆರಂಭವಾಯಿತು. ಆದರೂ ಗುರುವಾರ ರಾತ್ರಿ ನಡೆದಿದ್ದ ಅಹಿತಕರ ಘಟನೆಯಿಂದ ನಗರದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಕಿಲ್ಲಾ, ಪಂಕಾ ಮಸೀದಿ ಸುತ್ತಮುತ್ತ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಲ್ಲಿನ ಅಂಗಡಿ, ಮುಂಗಟ್ಟುಗಳು ತೆರೆದಿದ್ದವಾದರೂ ಅಲ್ಲಿರುವ ಮೂರ್ನಾಲ್ಕು ಸರ್ಕಾರಿ ಶಾಲೆಗಳಿಗೆ ಶನಿವಾರವೂ ಮಕ್ಕಳು ಬರಲಿಲ್ಲ. ಕಾಣ್ಣಾಯಿಸಿದ ಕಡೆಗೆಲ್ಲ ಪೊಲೀಸರು, ಪೊಲೀಸ್ ವಾಹನಗಳೇ ಕಂಡುಬರುತ್ತಿದ್ದ ಕಾರಣ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಶಾಲೆಗಳಿಗೆ ರಜೆ ಘೋಷಣೆ ಮಾಡಿಲ್ಲವಾದರೂ ಮಕ್ಕಳು ಬಾರದ್ದರಿಂದ ಶಿಕ್ಷಕರು ಶಾಲಾ ಸಮಯದವೆರೆಗೆ ಇದ್ದು ಸಂಜೆ ತೆರಳಿದರು.
- ಆರ್.ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವರು
-ವೀಣಾ ವಿಜಯಾನಂದ ಕಾಶಪ್ಪನವರ ವಿ.ವಿ.ಕೆ. ಫೌಂಡೇಶನ್ ಬಾಗಲಕೋಟೆ ಹಾಗೂ ಜಿಪಂ ಮಾಜಿ ಅಧ್ಯಕ್ಷರು ಬಾಗಲಕೋಟೆ
ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ:ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ಖಂಡಿಸಿ ಶುಕ್ರವಾರ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಂದೀಪ ಸಿದ್ದಪ್ಪ ಘೆರಡೆ(38), ಅಶೀಖ ಬಾರಕೇರ(22) ಬಂಧಿತರು.ಶುಕ್ರವಾರ ಮಧ್ಯಾಹ್ನ 12.30ಕ್ಕೆ ಇಬ್ಬರೂ ಆರೋಪಿಗಳು ಗಲಭೆ ಸೃಷ್ಟಿಸುವ ಉದ್ದೇಶದಿಂದ ಖಾಸಗಿ ಆಸ್ತಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಪೈಕಿ ಅಶೋಕ ಬಾರಕೇರನನ್ನು ಬಂಧಿಸಲು ಪೊಲೀಸರು ಮುಂದಾದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿ ಬಿದ್ದು ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಮ್ಮ ಸಿಬ್ಬಂದಿಯೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇಬ್ಬರ ಆರೋಪಿಗಳು ಕಲ್ಲು ಎಸೆಯುವ ಚಿತ್ರಗಳನ್ನೂ ಎಸ್ಪಿ ಅವರು ಬಿಡುಗಡೆಗೊಳಿಸಿದ್ದಾರೆ.