ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕದ ಇತಿಹಾಸದಲ್ಲಿ ಹನ್ನೆರಡನೇ ಶತಮಾನವು ಭಕ್ತಿಯ ಸುವರ್ಣಯುಗವಾಗಿತ್ತು ಎಂದು ನಿವೃತ್ತ ಮುಖ್ಯ ಎಂಜಿನಿಯರ್ ಶಂಕರ ದೇವನೂರು ಹೇಳಿದರು.ಬಿಳಿಗಿರಿರಂಗನ ಬೆಟ್ಟದಲ್ಲಿ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದಲ್ಲಿ ಅವರು ಮಾತನಾಡಿದರು.ಭಕ್ತಿ ಜೀವಾತ್ಮನನ್ನು ಭಗವಂತನಲ್ಲಿ ಒಂದಾಗಿಸಲು ಉತ್ತಮ ಮಾರ್ಗ. ಭಕ್ತಿ ಎಂದರೆ ಕೂಡುವುದು, ಒಂದಾಗುವುದು ಎಂದರ್ಥ. ಭಕ್ತಿಯನ್ನು ಹೇಗೆ ಮಾಡಬೇಕೆಂಬುದನ್ನು ಎಲ್ಲಾ ಶರಣರ ಜೀವನ ನೋಡಿ ಅರ್ಥಮಾಡಿಕೊಳ್ಳಬೇಕು. ಭಕ್ತನು ಹೇಗಿರಬೇಕೆಂದರೆ ಶಾಂತನಾಗಿ, ಹಿತವಚನಿಯಾಗಿ, ಸಕಲರಿಗೂ ಲೇಸನ್ನೇ ಬಯಸುವಂಥವನಾಗಿರಬೇಕು. ಗುರುಲಿಂಗ ಜಂಗಮರಲ್ಲಿ ಶ್ರದ್ಧೆಯುಳ್ಳವನೇ ನಿಜವಾದ ಭಕ್ತ. ಇಡೀ ವಚನ ಸಾಹಿತ್ಯವು ಭಕ್ತಿಯ ಭಂಡಾರವಾಗಿದೆ. ಮನುಷ್ಯನ ಮನಸ್ಸಿನ ಎಲ್ಲಾ ಕಳೆಗಳನ್ನು ವಚನ ಸಾಹಿತ್ಯವು ಹಸನಮಾಡುತ್ತದೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಕುಟ ಪ್ರಾಯವಾದುದು ಎಂದು ಅವರು ಹೇಳಿದರು.ಅಂಕಣಕಾರ ಎಸ್. ಷಡಕ್ಷರಿ ಮಾತನಾಡಿ, ಭಗವಂತನ ನಾಮಸ್ಮರಣೆ ಮಾಡುತ್ತಿದ್ದರೆ ಮನಸ್ಸು ಶಾಂತವಾಗಿರುತ್ತದೆ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಭಗವಂತನ ಮೇಲೆ ಹಾಕಿ ಮುಂದೆ ಸಾಗಬೇಕು. ಚಿಂತೆ ಮಾಡದೆ ಚಿಂತನೆ ಮಾಡಬೇಕು. ಗುರುವಿನ ಆಶೀರ್ವಾದದಿಂದ ಗುರಿಯನ್ನು ಮುಟ್ಟುವಕಡೆಗೆ ಸಾಗಬೇಕು ಎಂದರು.ಅತಿಯಾಗಿ ಲೋಭಿಯಾಗಿರಬಾರದು ಮತ್ತು ಅವಲಂಬಿತನಾಗಬಾರದು. ಅಸಹಾಯಕರಿಗೆ ಸಹಾಯ ಮಾಡುವುದೇ ನಿಜವಾದ ಸಾರ್ಥಕ ಜೀವನ. ಜೀವನದಲ್ಲಿ ಬರುವ ಕಷ್ಟನಷ್ಟಗಳನ್ನು ಸರ್ವಚಿತ್ತದಿಂದ ನೋಡಿದಾಗ ಮಾತ್ರ ನಿಶ್ಚಿಂತವಾಗಿರಬಹುದು ಎಂದು ಅವರು ತಿಳಿಸಿದರು.ನಿವೃತ್ತ ಡಿವೈಎಸ್ಪಿ ಜಿ.ಬಿ. ರಂಗಸ್ವಾಮಿ ಮಾತನಾಡಿ, ಇಂದಿನ ಯುಗವು ಅಂತರಜಾಲಮಯವಾಗಿದೆ. ಎಲ್ಲರ ಹತ್ತಿರವೂ ಸ್ಮಾರ್ಟ್ ಫೋನ್ ಗಳಿವೆ. ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಹೆಚ್ಚು ವಿದ್ಯಾವಂತರೆ ಬಲಿಯಾಗುತ್ತಿದ್ದಾರೆ. ಅಂತರ್ಜಾಲದಿಂದ ಎಷ್ಟು ಉಪಯೋಗಗಳಿವೆಯೋ ಅದು ಅಷ್ಟೇ ದುರುಪಯೋಗಕ್ಕೂ ಬಳಕೆಯಾಗುತ್ತಿದೆ. ಯಾವುದೇ ರೀತಿಯ ಲಾಟರಿ, ಉಚಿತ ಮತ್ತು ವಿನಾಯಿತಿ ಯೋಜನೆ ಬಗ್ಗೆ ಕರೆಗಳು ಬಂದರೆ ಯಾವುದೇ ಅಮಿಷಕ್ಕೆ ಬಲಿಯಾಗದೆ ಅದನ್ನು ಮೊಟಕುಗೊಳಿಸಬೇಕು. ಅಂತರಜಾಲದಿಂದ ಆಗುವ ಆರ್ಥಿಕ ಅಪರಾಧಗಳಿಗೆ ಜಾಗೃತಿಯೇ ಮದ್ದು ಎಂದು ಅವರು ಹೇಳಿದರು.ಶಿಬಿರದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಧ್ಯಾನ ಹಾಗೂ ಸಂಜೆ ದೇಸಿ ಆಟಗಳಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಪ್ರಾರ್ಥನೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.