ಸಂಸ್ಕಾರ, ಪರಿಶ್ರಮದಿಂದ ಬದುಕು ಉಜ್ವಲ: ರಂಭಾಪುರಿ ಶ್ರೀ

KannadaprabhaNewsNetwork | Published : Feb 16, 2024 1:56 AM

ಸಾರಾಂಶ

ಜನಮಾನಸಕ್ಕೆ ಸನ್ಮಾರ್ಗ ತೋರಿಸುವುದೇ ನಿಜವಾದ ತಪಸ್ಸು. ಸಂಸ್ಕಾರ ಮತ್ತು ಪರಿಶ್ರಮದಿಂದ ಮಾನವನ ಬದುಕು ಉಜ್ವಲಗೊಳ್ಳುವುದು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಜನಮಾನಸಕ್ಕೆ ಸನ್ಮಾರ್ಗ ತೋರಿಸುವುದೇ ನಿಜವಾದ ತಪಸ್ಸು. ಸಂಸ್ಕಾರ ಮತ್ತು ಪರಿಶ್ರಮದಿಂದ ಮಾನವನ ಬದುಕು ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ನುಡಿದರು.

ತಾಲೂಕಿನ ಚನ್ನಳ್ಳಿ ಸಮೀಪದ ಕಡೇನಂದಿಹಳ್ಳಿಯ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ ೩೩ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಹಣತೆ ತನಗಾಗಿ ಉರಿಯುವುದಿಲ್ಲ. ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಅನೇಕ ಮಹಾತ್ಮರು ಬೇರೆಯವರ ಒಳಿತಿಗಾಗಿ ಸದಾ ಶ್ರಮಿಸುತ್ತಾರೆ. ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ಸುಳ್ಳಿಗೆ ಹಲವು ದಾರಿ ಆದರೆ ಸತ್ಯಕ್ಕೆ ಇರುವುದೊಂದೇ ದಾರಿ. ಸಂಸ್ಕಾರದ ಪೆಟ್ಟಿನಿಂದ ಜೀವನದ ಮೌಲ್ಯ ಹೆಚ್ಚುತ್ತದೆ. ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸ ಬದಲಿಸಲು ಸಾಧ್ಯವಿಲ್ಲ. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಶ್ರೇಯಸ್ಸಿಗೆ ದಶಧರ್ಮ ಸೂತ್ರಗಳ ಪಾಲನೆ ಮುಖ್ಯವೆಂದು ಬೋಧಿಸಿದ್ದಾರೆ. ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳವರ ಶ್ರಮ ಸಾಧನೆ ಅಪೂರ್ವವಾದುದು. ಅಲ್ಪ ಸಮಯದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆಂದು ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು, ಪೀಠಾರೋಹಣದ ೩೩ನೇ ವರ್ಧಂತಿ ಮಹೋತ್ಸವ ಇದೇ ಕ್ಷೇತ್ರದಲ್ಲಿ ಜರುಗುತ್ತಿರುವುದು ಸಂತೋಷದ ಸಂಗತಿ ಎಂದರು.

ನೇತೃತ್ವ ವಹಿಸಿದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ೩೩ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಜರುಗುತ್ತಿರುವುದು ಭಕ್ತ ಸಮುದಾಯಕ್ಕೆ ಸಂತೋಷವನ್ನು ಉಂಟು ಮಾಡಿದೆ. ಶ್ರೀ ಜಗದ್ಗುರುಗಳವರ ಆಶೀರ್ವಾದ ಬಲದಿಂದ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಎಲ್ಲರಿಗೂ ಹೆಮ್ಮೆ ತಂದಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ. ರಂಭಾಪುರಿ ಜಗದ್ಗುರುಗಳು ೩೨ ವರ್ಷದಲ್ಲಿ ರಾಜ್ಯ ಹೊರರಾಜ್ಯಗಳಲ್ಲಿ ಸಂಚರಿಸಿ ಧರ್ಮ ಜಾಗೃತಿಯೊಂದಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ರಂಭಾಪುರಿ ಪೀಠದ ಇತಿಹಾಸದಲ್ಲಿ ಅಜರಾಮರವಾಗಿವೆ. ರೇವಣಸಿದ್ಧೇಶ್ವರ ಶ್ರೀಗಳವರ ಕ್ರಿಯಾಶೀಲ ಬದುಕು ಮತ್ತು ಅವರು ಮಾಡಿದ ತಪಸ್ಸು ಈ ಭಾಗದ ಭಕ್ತರಿಗೆ ಬಹು ದೊಡ್ಡ ಸಂಪತ್ತಾಗಿದೆ. ಶ್ರೀಗಳವರ ಸಾಧನೆ ಭಕ್ತರ ಮೇಲಿಟ್ಟಿರುವ ವಾತ್ಸಲ್ಯ ಈ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.

ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಗ್ರಹಿಸಿದ ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಕಲನವನ್ನು ಯಡೆಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.

ಸಮಾರಂಭದಲ್ಲಿ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಕನ್ನೂರು-ಸಿಂಧನೂರು ಸೋಮನಾಥ ಸ್ವಾಮೀಜಿ, ಚನ್ನಗಿರಿ ಕೇದಾರ ಶಿವಶಾಂತವೀರ ಸ್ವಾಮೀಜಿ, ಬಿಳಿಕಿ ರಾಚೋಟೇಶ್ವರ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಸ್ವಾಮೀಜಿ, ಕಾರ್ಜುವಳ್ಳಿ ಸದಾಶಿವ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಸ್ವಾಮೀಜಿ, ಸೇರಿದಂತೆ ಹಲವಾರು ಮಠಾಧೀಶರು ಉಪಸ್ಥಿತರಿದ್ದರು.

ಹಿರೇಕೆರೂರ ಶಾಸಕ ಯು.ಬಿ. ಬಣಕಾರ, ಚಿತ್ರನಟ ಕೆ. ಸುಚೇಂದ್ರ ಪ್ರಸಾದ, ಎನ್.ವಿ. ಈರೇಶ್, ಪ್ರಸನ್ನ ಭೋಜಶೆಟ್ಟರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿ ವೀರಸಿಂಹಾಸನವನ್ನು ಆರೋಹಣ ಮಾಡಿದರು.

Share this article