ಕನ್ನಡಪ್ರಭ ವಾರ್ತೆ ಹಾಸನ ಸಮಾಜದಲ್ಲಿ ಕಾನೂನು ವ್ಯವಸ್ಥೆ ಇಲ್ಲದಿದ್ದರೇ ಬದುಕು ಏನಾಗುತಿತ್ತು ಎನ್ನುವ ಬಗ್ಗೆ ನೆನಪಿಸಿಕೊಂಡರೇ ನಮಗೆ ಭಯವಾಗುತ್ತದೆ. ದೇಶದ ಇತಿಹಾಸದಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಬಸ್ ನಿಲ್ದಾಣ ಎದುರು ಇರುವ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಲಾವಣೆಯಲ್ಲಿರುವವರನ್ನು ಸಮಾಜ ನೋಡುವ ರೀತಿ ಬೇರೆಯಿದೆ. ಚಲಾವಣೆಯಿಂದ ಪಕ್ಕಕ್ಕೆ ಸರಿದವರನ್ನು ಬೇರೆ ರೀತಿ ಕಾಣುತ್ತದೆ. ಪ್ರಪಂಚ ಇರುವುದು ಹೀಗೆ. ಈ ಸಮಯದಲ್ಲಿ ಯಾರಾದರೂ ಆಕ್ಷೇಪಣೆ ಮಾಡಿದಾಗ ಬೇಸರ ಮಾಡಿಕೊಳ್ಳಬಾರದು. ನಾನು ಕಳೆದ ಎರಡು ವರ್ಷಗಳಿಂದ ಮೌನ ಗೀತೆಯಲ್ಲಿದ್ದೆನು. ಇದೊಂದು ಗೌರವ ಎಂದು ನಾನು ಭಾವಿಸಿದ್ದೇನೆ. ಆಗಿನ ನ್ಯಾಯಾಲಯದಲ್ಲಿ ಆಚರಣೆ ಮಾಡುತ್ತಿರುವುದು ಒಂದು ಸೈಡಾದರೇ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಮುಖ್ಯ ನ್ಯಾಯಾಧೀಶರು ನನ್ನ ದೃಷ್ಠಿಯಲ್ಲಿ ಒಂದೆ. ಅವರವರ ಅನುಭವ ಬೇರೆ ಬೇರೆ ಕಾರಣಗಳಿಂದ ಬೇರೆ ಸ್ಥಾನದಲ್ಲಿರುತ್ತದೆ. ನ್ಯಾಯಾಧೀಶರೆಂದರೆ ಒಂದೇ. ಒಂದು ವೇಳೆ ಈ ಕಾನೂನು ವ್ಯವಸ್ಥೆ ಇಲ್ಲದಿದ್ದರೇ ಬದುಕು ಏನಾಗುತಿತ್ತು ಎಂದರು.
೨೪೦೦ ವರ್ಷಗಳ ಹಿಂದೆ ಪ್ರಪಂಚದಲ್ಲಿ ಬದುಕಿಗೆ ಶಿಸ್ತು ಕ್ರಮಬದ್ಧವಾಗಿ ಇರಬೇಕೆಂದು ಹೇಳಲಾಗಿತ್ತು. ನಂತರದ ದಿನಗಳಲ್ಲಿ ಚಕ್ರವರ್ತಿ, ರಾಜ ಮಹಾರಾಜರು ಬಂದರು. ಈ ವೇಳೆ ಇದ್ದ ನ್ಯಾಯಾಲಯದ ವ್ಯವಸ್ಥೆ ಪ್ರಸ್ತೂತದ ನ್ಯಾಯಾಂಗದ ವ್ಯವಸ್ಥೆಗೂ ವ್ಯತ್ಯಾಸ ಏನಿತ್ತು ಬಗ್ಗೆ ತಿಳಿಯಬೇಕು. ಹಿಂದೆ ದೊರೆ ಹೇಳಿದ್ದೆ ಶಾಸನ. ದೊರೆ ತಲೆ ತೆಗೆಯಬೇಕೆಂದು ಸೂಚಿಸಿದರೇ ಅದಕ್ಕೆ ತಡೆ ಮಾಡಲು ಅವಕಾಶ ಇರಲಿಲ್ಲ ತಲೆ ತೆಗೆಯಲೆಬೇಕು. ನಂತರದಲ್ಲಿ ಈಗಿರುವ ನ್ಯಾಯಾಲಯದಲ್ಲಿ ಯಾವುದೇ ತೀರ್ಪು ಕೊಡಬೇಕಾದರೇ ವಾದ ವಿವಾದಗಳು ಇರುತ್ತದೆ ಎಂದು ಹೇಳಿದರು. ಸಮಾಜಕ್ಕೆ ವಕೀಲರು ನೀಡಿರುವ ಕೊಡುಗೆಯ ನೆನಪಿಗಾಗಿ ಆತ್ಮವಲೋಕನ ಮಾಡಿಕೊಳ್ಳುವ ದಿನ ಇದಾಗಿದೆ. ನ್ಯಾಯ, ನೀತಿ, ಕಾನೂನಿನ ನಿಯಮಕ್ಕೆ ಬದ್ಧತೆಯನ್ನು ಪುನರ್ ಉಚ್ಛರಿಸಲು ಇದು ಉತ್ತಮ ದಿನ. ಕಾನೂನು ಮತ್ತು ನ್ಯಾಯ ಸಮಾಜವನ್ನು ಅಖಂಡವಾಗಿ ಇರಿಸುತ್ತದೆ. ವಕೀಲರು ನ್ಯಾಯದ ವಾಸ್ತು ಶಿಲ್ಪಿಗಳಾಗಿ ಇದನ್ನು ಖಚಿತ ಪಡಿಸಿಕೊಳ್ಳಲು ನಿರ್ಣಯಕ ಪಾತ್ರವಹಿಸುತ್ತಾರೆ ಎಂದರು. ಕಾನೂನು ಎಂಬ ವ್ಯವಸ್ಥೆ ಇಲ್ಲದಿದ್ದರೇ ಬದುಕು ಹೇಗೆ ಎನ್ನುವ ದೊಡ್ಡ ಪ್ರಶ್ನಾತೀತ ಪ್ರಶ್ನೆ ನಮ್ಮ ಮುಂದೆ ಉದ್ಭವಿಸುತ್ತದೆ. ನೆನಪಿಸಿಕೊಳ್ಳಲು ಕೂಡ ನಮಗೆ ಭಯವಾಗುತ್ತದೆ. ದೇಶದ ಇತಿಹಾಸದಲ್ಲಿ ವಕೀಲರ ಪಾತ್ರ ಹೇಳಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ವಕೀಲರು ತಮ್ಮ ವೃತ್ತಿ ಬದಿಗೊತ್ತಿ ಹೋರಾಟಕ್ಕೆ ಧುಮಕಿದ್ದರು. ಎಲ್ಲಾ ಪ್ರಜೆಗಳಿಗೆ ತಮ್ಮ ಹಕ್ಕು ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದಂತೆ ವಕೀಲರು ಆಗಿದ್ದಾರೆ. ಯಾವುದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಉತ್ತಮ ಎಂದು ಇದೆ ವೇಳೆ ಯುವ ವಕೀಲರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್, ಉಪಾಧ್ಯಕ್ಷ ಎಚ್.ಎನ್. ಯೋಗೀಶ್, ಖಜಾಂಚಿ ಎಚ್.ಎನ್. ಪ್ರತಾಪ್, ಜಂಟಿ ಕಾರ್ಯದರ್ಶಿ ಆರ್. ರೂಪ ಕರೀಗೌಡ, ಶ್ರೀಕಾಂತ್ ಇತರರು ಉಪಸ್ಥಿತರಿದ್ದರು. ಬಿ. ಚಂದ್ರಶೇಖರ್ ಅವರು ಕಾರ್ಯಕ್ರಮ ನಿರೂಪಿಸಿದರು.