ಧಾರವಾಡ: ಶ್ರೀರಾಮನಂತೆ ನಾವು ಕೂಡ ದೇಶಭಕ್ತಿ ಮೆರೆದರೆ ರಾಮಾಯಣ ಓದಿದ್ದು, ಕೇಳಿದ್ದು ಸೇರಿದಂತೆ ಜೀವನವೇ ಸಾರ್ಥಕವಾಗುತ್ತದೆ ಎಂದು ಅಂಕಣಕಾರ ಡಾ. ಗುರುರಾಜ ಕರ್ಜಗಿ ಹೇಳಿದರು.
ವ್ಯಕ್ತಿಯಲ್ಲ, ದೇಶ ಮೊದಲು ಎಂದು ಶ್ರೀರಾಮಚಂದ್ರನ ಮೂಲಕ ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿ ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ತಾನು ಶಾಶ್ವತವಲ್ಲ, ಅಯೋಧ್ಯೆ ಶಾಶ್ವತ. ಅಯೋಧ್ಯೆ ಒಳಿತೇ ಮುಖ್ಯ ಎಂದು ಹಲವು ಪ್ರಸಂಗಗಳಲ್ಲಿ ವಾಲ್ಮಿಕಿ ಹೇಳಿದ್ದಾನೆ. ರಾಜ್ಯದ ಜನರ ಒಳಿತಿಗಾಗಿ ಶ್ರಮಿಸಿದ್ದಾನೆ. ರಾಜ್ಯದ ಜನರ ಭಾವನೆಗಳಿಗೆ ಸ್ಪಂದಿಸಿದ್ದಾನೆ ಎಂದರು.
ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಕೆಲ ಆದರ್ಶಗಳನ್ನು ನಮ್ಮ ಮುಂದಿಟ್ಟಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ನಾವು ನಿರ್ಧಾರ ಕೈಗೊಳ್ಳಬೇಕು. ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಧರ್ಮ ಮಾರ್ಗ ಬಿಡದ ಮರ್ಯಾದಾಪುರುಷ ಶ್ರೀರಾಮ, ಮಹಾಶಕ್ತಿ, ಮಹಾಭಕ್ತಿ ಹೊಂದಿದ್ದರೂ ಅಹಂಕಾರದ ಮದದಲ್ಲಿ ಮಾಡಿದ ಒಂದು ದೋಷದಿಂದ ಮಣ್ಣುಪಾಲಾದ ರಾವಣ, ಧರ್ಮದ ಹಾದಿಯೇ ಆದರ್ಶ ಎಂದು ನಂಬಿ ಯಜಮಾನ ರಾಮನಿಗೆ ತಕ್ಕ ದಾಸನಾದ ಹನುಮಂತ, ವಾಲ್ಮೀಕಿ ರಾಮಾಯಣದಲ್ಲಿ ನೀಡಿದ ಆದರ್ಶಗಳು. ಯಾವುದೇ ಸಲಹೆ ನೀಡದ ವಾಲ್ಮೀಕಿ ಆದರ್ಶ ಪಾತ್ರಗಳನ್ನು ನಮ್ಮ ಮುಂದಿಟ್ಟಿದ್ದಾರೆ ಎಂದು ತಿಳಿಸಿದರು.ಸಜ್ಜನರ ಮೌನ ದುರ್ಜನರ ದುಷ್ಟತನಕ್ಕಿಂತ ಕೆಟ್ಟದ್ದು ಎಂಬುದನ್ನು ನಮಗೆ ರಾಮಾಯಣ ಕಲಿಸುವ ದೊಡ್ಡ ಪಾಠ. ವಾಲ್ಮೀಕಿಯಂತೆ ವಿಶ್ಲೇಷಣೆ ಮಾಡುವ ಕವಿ ಮತ್ತೊಬ್ಬರಿಲ್ಲ. ಪ್ರತಿ ಹಂತದಲ್ಲೂ ಸ್ವವಿಮರ್ಷೆ ಅವಶ್ಯಕ ಎಂಬುದನ್ನು ಅವರು ಪ್ರತಿಪಾದಿಸುತ್ತಾನೆ. ಪಾತ್ರಗಳ ಮನಸನ್ನು ಅರ್ಥ ಮಾಡಿಕೊಳ್ಳುವ ಅವನಂಥ ಮನಶಾಸ್ತಜ್ಞರು ಬೇರೊಬ್ಬರಿಲ್ಲ. ಇದೇ ಕಾರಣಕ್ಕೆ ರಾಮಾಯಣ ನಮ್ಮ ಕಲ್ಪನೆಗೂ ಮೀರಿ ಹೋಗುತ್ತದೆ ಎಂದು ನುಡಿದರು.