- ದೊಡ್ಡೆತ್ತಿನಹಳ್ಳಿಯಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀ ಆಶೀರ್ವಚನ । ಧರ್ಮ ಜಾಗೃತಿ ಸಮಾರಂಭ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶಿವ ಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ದೇವರು ಕೊಟ್ಟ ಕೊಡುಗೆ ಅಮೂಲ್ಯ. ಅರಿವು ಉಳ್ಳ ಮಾನವ ಜನ್ಮದಲ್ಲಿ ಹುಟ್ಟಿದ ಮೇಲೆ ಒಂದಿಷ್ಟಾದರೂ ಶಿವಧ್ಯಾನ ಮಾಡದಿದ್ದರೆ ಜೀವನ ನಿರರ್ಥಕ. ಸಂಸ್ಕಾರ ಕೊಡುವ ಶ್ರೀ ಗುರುವನ್ನು ನಿರ್ಲಕ್ಷ್ಯ ಮಾಡಬಾರದು. ದೇವರು ಮತ್ತು ಧರ್ಮದಲ್ಲಿ ನಂಬಿಕೆ-ಶ್ರದ್ಧೆ ಹೊಂದಿರಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ನುಡಿದರು.ತಾಲೂಕಿನ ದೊಡ್ಡತ್ತಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಮೊದಲ್ಗೊಂಡು ಇನ್ನಿತರ ದೇವಾಲಯಗಳ ಉದ್ಘಾಟನೆ ಕಳಸಾರೋಹಣ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇವನೊಬ್ಬ ನಾಮಹಲವು ಎಂಬ ಗಾದೆಮಾತಿನಂತೆ ಒಬ್ಬ ಭಗವಂತನಿಗೆ ಸಹಸ್ರಾರು ಹೆಸರುಗಳಿವೆ. ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮ ಒಬ್ಬನೇ ಆಗಿದ್ದಾನೆ ಎಂಬ ಪರಮ ಸತ್ಯವನ್ನು ಅರಿತು ಬಾಳಬೇಕು. ಆಗ ಎಲ್ಲೆಡೆ ಸಾಮರಸ್ಯ, ಸೌಹಾರ್ದತೆ ಬೆಳೆದು ಬರಲು ಸಾಧ್ಯ. ದೇವರು, ಧರ್ಮ, ಜಾತಿ, ಪ್ರಾಂತೀಯ ಹೆಸರಿನಲ್ಲಿ ಅನೇಕ ದುರಂತಗಳು ನಡೆಯುತ್ತಿರುವುದು ನೋವಿನ ಸಂಗತಿ ಎಂದರು.ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥಗಳನ್ನು ಮೀರಿ ವಿಶ್ವಬಂಧುತ್ವದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದಾರೆ. ಬದುಕಿ, ಬಾಳುವ ಜನಾಂಗಕ್ಕೆ ಅವರ ವಿಚಾರಧಾರೆಗಳು ದಾರಿದೀಪವಾಗಿವೆ. ದೊಡ್ಡತ್ತಿನಹಳ್ಳಿಯಲ್ಲಿ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮೊದಲ್ಗೊಂಡು ಹಲವಾರು ದೇವಾಲಯಗಳು ಪುನರ್ ನಿರ್ಮಿಸಿ, ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಹೊನ್ನಾಳಿ ಶಾಸಕ ಜಿ.ಡಿ.ಶಾಂತನಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿರಿಯರ ಆದರ್ಶ ಚಿಂತನೆಗಳು ಯುವಜನಾಂಗಕ್ಕೆ ಆಶಾಕಿರಣವಾಗಿವೆ. ಹೊಸ ಚಿಗುರು ಹಳೇ ಬೇರಿನಿಂದ ಮರಕ್ಕೆ ಶೋಭೆ ಬರುವಂತೆ, ಹಳೆಯದು ಹೊಸತು ಸೇರಿದರೆ ಉಜ್ವಲ ಬದುಕು ಪ್ರಾಪ್ತಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿ, ವೀರಶೈವ ಧರ್ಮ ಸಂಸ್ಕೃತಿ ಮತ್ತು ಗುರು ಪರಂಪರೆಯ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರಬೇಕು ಎಂದರು.
ಹಾರನಹಳ್ಳಿ ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ರಾಂಪುರದ ಶಿವಕುಮಾರ ಹಾಲಸ್ವಾಮಿಗಳು, ಗೋವಿನಕೋವಿ ವಿಶ್ವಾರಾಧ್ಯ ಹಾಲಸ್ವಾಮಿಗಳು, ನ್ಯಾಮತಿ ಕೋಹಳ್ಳಿ ಹಿರೇಮಠದ ಎಸ್.ಕೆ. ವಿಶ್ವಾರಾಧ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ನ್ಯಾಮತಿ ಬನಶಂಕರಿ ಮಹಿಳಾ ಬಳಗದವರಿಂದ ಪ್ರಾರ್ಥನೆ ಜರುಗಿತು. ಶಿವಮೊಗ್ಗದ ಶಾಂತಾ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಭಕ್ತರಿಗೆ ಅನ್ನ ದಾಸೋಹ ಜರುಗಿತು.
- - -(ಕೋಟ್) ದೊಡ್ಡತ್ತಿನಹಳ್ಳಿ ಯುವಜನತೆ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿರುವುದು ಸಂತೋಷದ ವಿಚಾರ. ಇಂಥ ಮನೋಭಾವನೆ ಈ ಕಾರ್ಯಕ್ರಮಕ್ಕೆ ಅಷ್ಟೇ ಸೀಮಿತಗೊಳ್ಳಬಾರದು. ನಿರಂತರ ಬದುಕಿನಲ್ಲಿ ಗುರುವಿನ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕು.
- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ- - -
-26ಎಚ್.ಎಲ್.ಐ1.ಜೆಪಿಜಿ:ನ್ಯಾಮತಿ ತಾಲೂಕಿನ ದೊಡ್ಡತ್ತಿನಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಶ್ರೀ ಆಶೀರ್ವಚನ ನೀಡಿದರು. ವಿವಿಧ ಮಠಾಧೀಶರು, ಗಣ್ಯರು ಇದ್ದರು.