ಗದಗ ವೀರೇಶ್ವರ ಪುಣ್ಯಾಶ್ರಮ ಕಲ್ಲಯ್ಯಜ್ಜಗೆ ಜೀವ ಬೆದರಿಕೆ

KannadaprabhaNewsNetwork |  
Published : Jun 25, 2026, 02:00 AM IST
ಸುದ್ದಿಗೋಷ್ಠಿಯಲ್ಲಿ ಕಲ್ಲಜ್ಜಯ್ಯಜ್ಜನವರು ಮಾತನಾಡಿದರು. | Kannada Prabha

ಸಾರಾಂಶ

ನಾನು ಆಶ್ರಮಕ್ಕೆ ಪೀಠಾಧಿಪಯಾಗುವ ವೇಳೆ ₹59 ಲಕ್ಷ ಸಾಲವಿತ್ತು. ಸಾಲವನ್ನು ಹೊತ್ತುಕೊಂಡೇ ಆಶ್ರಮದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಎಲ್ಲ ಸಾಲವನ್ನು ತೀರಿಸಿ, ಅಂದಾಜು ₹4,08 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೇನೆ ಎಂದು ಪೀಠಾಧಿಪತಿ ಕಲ್ಲಯ್ಯಜ್ಜನವರು ತಿಳಿಸಿದ್ದಾರೆ.

ಗದಗ: ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟ್ ಕಮಿಟಿಯ 3 ಜನ ಹಾಗೂ ಶಿಕ್ಷಣ ಸಮಿತಿಯ 3 ಜನರಿಂದ ನನಗೆ ಜೀವ ಬೆದರಿಕೆ ಇದೆ. ಆತಂಕದಲ್ಲಿ ಬದುಕುತ್ತಿದ್ದೇನೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ ಅವರು, ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟ್ ಕಮಿಟಿಯ ಸದಸ್ಯರಾದ ಇಟಗಿ ವೀರಭದ್ರಪ್ಪ, ಪ್ರಕಾಶ ಬಸರಿಗಿಡದ, ವಸಂತಗೌಡ ಪೊಲೀಸ‌ಪಾಟೀಲ ಹಾಗೂ ಶಿಕ್ಷಣ ಸಮಿತಿಯ ಎಸ್.ಎಂ. ಗೌಡರ, ಚಕ್ರಣ್ಣವರ, ಶ್ರೀಮಠ ಮಲ್ಲಯ್ಯ ಅವರಿಂದ ನನಗೆ ಜೀವ ಬೆದರಿಕೆ ಇದೆ. ಯಾವುದೇ ಕ್ಷಣದಲ್ಲಾದರೂ ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ ಎಂದು ಗದ್ಗದಿತರಾಗಿ ಕಣ್ಣೀರಿಟ್ಟರು ಕಲ್ಲಯ್ಯಜ್ಜ.

ನಾನು ಆಶ್ರಮಕ್ಕೆ ಪೀಠಾಧಿಪಯಾಗುವ ವೇಳೆ ₹59 ಲಕ್ಷ ಸಾಲವಿತ್ತು. ಸಾಲವನ್ನು ಹೊತ್ತುಕೊಂಡೇ ಆಶ್ರಮದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಎಲ್ಲ ಸಾಲವನ್ನು ತೀರಿಸಿ, ಅಂದಾಜು ₹4,08 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೇನೆ. ಆಶ್ರಮದ ಎಲ್ಲ ಲೆಕ್ಕಪತ್ರ, ಖರ್ಚು ವೆಚ್ಚಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ದೇಣಿಗೆ ನೀಡಿದ ಪ್ರತಿಯೊಂದು ರುಪಾಯಿಗೂ ಲೆಕ್ಕ ಇಟ್ಟಿದ್ದೇನೆ ಎಂದು ವಿವರಿಸಿದರು.

ಈ ಹಿಂದೆ ಆಶ್ರಮದಿಂದ ಹಲವಾರು ರೀತಿಯ ವಸ್ತುಗಳನ್ನು ಬೇರೆಡೆ ರವಾನೆಯಾಗುತ್ತಿದ್ದವು. ಅದನ್ನೆಲ್ಲ ತಪ್ಪಿಸಿ ಕಟ್ಟುನಿಟ್ಟಾಗಿ ಆಶ್ರಮದಲ್ಲಿನ ಮಕ್ಕಳಿಗಾಗಿ ಉಳಿಸಿದ್ದೇನೆ. ಹಗಲು- ರಾತ್ರಿ ಎನ್ನದೇ ಊರೂರು ಸುತ್ತಿ ಇಲ್ಲಿರುವ ಮಕ್ಕಳಿಗಾಗಿ ದೇಣಿಗೆ ಸಂಗ್ರಹಿಸಿದ್ದೇನೆ. ಆಶ್ರಮದ ಖಾತೆಯಲ್ಲಿರುವ ಹಣವನ್ನು ಗಮನಿಸಿದ ಇಟಗಿ ವೀರಭದ್ರಪ್ಪ ಅವರು ತಮಗೆ ₹10 ಲಕ್ಷ ಕೊಡುವಂತೆ ಕೇಳಿದರು. ಆದರೆ ನಾನು ಮಠದ ಹಣವನ್ನು ಕೊಡಲು ನಿರಾಕರಿಸಿದೆ. ಆ ಕಾರಣಕ್ಕಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿ ಹರಿಬಿಟ್ಟು ನನ್ನ ತೇಜೋವಧೆಗೆ ಯತ್ನಿಸಿ, ಮಾನಸಿಕ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಇನ್ನುಳಿದ 5 ಜನರೂ ಅನೇಕ ವರ್ಷಗಳಿಂದ ನನಗೆ ಮಾನಸಿಕ ಕಿರುಕುಳ ಕೊಡುತ್ತಲೇ ಬಂದಿದ್ದಾರೆ. ಇಷ್ಟು ವರ್ಷ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇನೆ. ಈಗ ಮಾಧ್ಯಮಗಳ ಮೂಲಕ ಟ್ರಸ್ಟ್ ಕಮಿಟಿ ಹಾಗೂ ಭಕ್ತರ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಈ ಬಗ್ಗೆ ಅಧಿಕೃತವಾಗಿ ಪೊಲೀಸ್ ಠಾಣೆಗೆ ಇವತ್ತೇ ದೂರು ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಆಶ್ರಮದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆದಿದ್ದೇ ನನಗೆ ಮುಳುವಾಗಿದೆ. ಟ್ರಸ್ಟ್ ನಲ್ಲಿರುವ ಸದಸ್ಯರಿಗೆ ಈ ಹಿಂದೆ ಸಿಗುತ್ತಿದ್ದ ಎಲ್ಲ ಲಾಭಗಳು ಬಂದ್ ಆಗುವುದಕ್ಕೆ ನಾನೇ ಕಾರಣ ಎಂದು ಅನಗತ್ಯವಾಗಿ ಕಿರುಕುಳ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರಿ, ಎಂ. ಕಲ್ಲಿನಾಥಶಾಸ್ತ್ರಿ, ವೀರೇಶ, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿ, ಚನ್ನಬಸಯ್ಯ ಬಂಕಾಪುರಮಠ ಸೇರಿದಂತೆ ಅನೇಕರು ಇದ್ದರು. ರಥೋತ್ಸವ ವಿವಾದಕ್ಕೆ ಸ್ಪಷ್ಟನೆ

ಇತ್ತೀಚೆಗೆ ಹಿಂದೂ ಸಂಘಟನೆಗಳ ಮುಖಂಡ ರಾಜು ಖಾನಪ್ಪನವರ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಲ್ಲಯ್ಯಜ್ಜನವರು ರಥೋತ್ಸವದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಕಳೆದ ನಾಲ್ಕು ವರ್ಷಗಳಿಂದ ರಥೋತ್ಸವ ನಿರಾತಂಕವಾಗಿ ನಡೆಯುತ್ತಿದೆ. ಪೀರಸಾಬ ದಂಪತಿಗಳು ರಥಕ್ಕೆ ಗಾಲಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಭಕ್ತರು ನೀಡುವ ದೇಣಿಗೆಯನ್ನು ಸ್ವೀಕರಿಸುವುದು ಮಠದ ಸಂಪ್ರದಾಯ. ಕೆಲವರು ಭಕ್ತಿ ಕಾಣಿಕೆ ಎಂದು ಹಾಕಿಸಿ ಕೊಡುತ್ತಾರೆ. ಕೆಲವರು ನಮ್ಮ ಹೆಸರು ಬೇಡ ಎಂದು ದೇಣಿಗೆ ನೀಡುತ್ತಾರೆ. ದೇಣಿಗೆ ನೀಡುವ ವಿಷಯದಲ್ಲಿ ಜಾತಿಯ ಬಣ್ಣ ಹಚ್ಚುವುದು ತರವಲ್ಲ ಎಂದು ಕಲ್ಲಯ್ಯಜ್ಜ ಸ್ಪಷ್ಟಪಡಿಸಿದರು.ವೀರೇಶ್ವರ ಪುಣ್ಯಾಶ್ರಮವು ಜಾತ್ಯತೀತ ಸಂಸ್ಥೆಯಾಗಿದ್ದು, ಇಲ್ಲಿ ಎಲ್ಲ ಜಾತಿ, ಜನಾಂಗದ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಪೀರಸಾಬ ಅವರೊಂದಿಗೆ ಮಠಕ್ಕೆ ಗುರು- ಶಿಷ್ಯರ ಸಂಬಂಧವಿದೆ. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಾರೆ. ಆಶ್ರಮದಿಂದ ಯಾವುದೇ ಆರ್ಥಿಕ ನೆರವು ಅವರಿಗೆ ಹೋಗಿಲ್ಲ. ಆಶ್ರಮದ ಕಾಲೇಜು ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದಲೇ ಸಮಿತಿಯ ಸದಸ್ಯರಾಗಿರುವ ಪೀರಸಾಬ ಕೌತಾಳ ಅವರಿಗೆ ಕಾಲೇಜಿನ ಜವಾಬ್ದಾರಿ ನೀಡಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹಕ್ಕೆ ನೀಡಿದ ದಾನ ಎಂದಿಗೂ ವ್ಯರ್ಥವಾಗದು: ಚನ್ನವೀರ ಸ್ವಾಮಿಗಳು
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ರಾಜಶ್ರೀ ಸಜ್ಜೇಶ್ವರ