ಕೊಪ್ಪಳ: ಬಸವಾದಿ ಶರಣ, ಶರಣೆಯರ ಪ್ರತಿಯೊಂದು ವಚನಗಳಲ್ಲಿ ಜೀವನ ಮೌಲ್ಯಗಳ ತುಡಿತ ಅಡಗಿದೆ. ಪಾಲಕರು ಮಕ್ಕಳಿಗೆ ಶರಣ-ಶರಣೆಯರ ನಡೆ,ನುಡಿ ಪರಿಪಾಲಿಸುವಂತೆ ಪ್ರೋತ್ಸಾಹಿಸಬೇಕು. ಆಗಲೇ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯವೆಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಸ್. ಗೋನಾಳ ಹೇಳಿದರು.
ನಗರದ ಶ್ರೀನಂದೀಶ್ವರ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕೃಷ್ಣ-ರುಕ್ಮಿಣಿಯ ವೇಷಭೂಷಣ ಹಾಗೂ ವಚನ ಕಂಠಪಾಠ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಕೊಪ್ಪಳ ತಾಲೂಕು ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಮೈಲಾರಪ್ಪ ಉಂಕಿ ಮಾತನಾಡಿ, ಮಕ್ಕಳು ಇಂತಹ ಸ್ಫರ್ಧೆಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು. ಶರಣರ ತತ್ವಾದರ್ಶ ಜೀವನದಲ್ಲಿ ಅಳವಡಸಿಕೊಂಡು ಮುನ್ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಮುಖ್ಯಶಿಕ್ಷಕ ಸುರೇಶ ಕುಂಬಾರ ಮಾತನಾಡಿ, ಶರಣರು ನುಡಿದಂತೆ ನಡೆದು ತೋರುವ ಸಾತ್ವಿಕ ಧೀಮಂತ ವ್ಯಕ್ತಿತ್ವ. ಅವರದು ದಯಾ ಮೂಲವಾದ ಧರ್ಮವಾಗಿತ್ತು. ಕಾಯಕ ಮಾಡದವನಿಗೆ ಪ್ರಸಾದ ತೆಗೆದುಕೊಳ್ಳುವ ಹಕ್ಕಿಲ್ಲವೆಂಬುದು ಅವರ ಸಿದ್ಧಾಂತವಾಗಿತ್ತು. ಆದ್ದರಿಂದ ೧೨ನೇ ಶತಮಾನದಲ್ಲಿ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಸಿದ್ಧಾಂತ ಎಲ್ಲ ಶಿವಶರಣರ ಬದುಕಿನಲ್ಲಿ ಇತ್ತು. ಅವರ ಆದರ್ಶಗಳಿಂದ ಸ್ಫೂರ್ತಿ ಪಡೆದು ಸುರಕ್ಷಿತ, ಬಲಿಷ್ಠ ಮತ್ತು ಸಮೃದ್ಧ ವಿಕಸಿತ ಭಾರತ ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿ ಕೊಪ್ಪಳ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷ ಮಧು ಪಾವಲಿ ಶೆಟ್ಟರ್ ಮಾತನಾಡಿ, ಕೃಷ್ಣ-ರುಕ್ಮಿಣಿ ವೇಷಧಾರಿ ಮಕ್ಕಳ ಮನಸು ಬೆಣ್ಣೆಯಂತೆ ಮೃದುವಾದದ್ದು. ಬೆಣ್ಣೆ ಕದ್ದ ಕೃಷ್ಣನು ಜಗದ ಬೆಳಕಾಗಿದ್ದನು. ಅದರಂತೆ ಇಂದಿನ ಮಕ್ಕಳು ನಾಳಿನ ಸತ್ಪ್ರಜೆಗಳಾಗಲಿ ಎಂದು ಆಶಿಸಿದರು.
ಶಿಕ್ಷಕ ಎ.ಪಿ. ಅಂಗಡಿ, ಇನ್ನರ್‌ವೀಲ್ ಕ್ಲಬ್‌ನ ರೇಖಾ ಕಡ್ಲಿ, ಸುವರ್ಣ ರಾಜು ಶೆಟ್ಟರ್ ಮಾತನಾಡಿದರು. ಹೇಮಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.