ಬಸವಸಾಗರಕ್ಕೆ ಜೀವಕಳೆ- ರೈತರಿಗೆ ಹರ್ಷ ತಂದ ಮಳೆ

KannadaprabhaNewsNetwork |  
Published : Jun 11, 2024, 01:37 AM IST
ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನ ನೋಟ. | Kannada Prabha

ಸಾರಾಂಶ

492.25 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 488.41. ಮೀ. ತಲುಪಿದ್ದು 19.89 ಟಿಎಂಸಿ ನೀರಿನ ಸಂಗ್ರಹವಿದೆ

ಅನಿಲ್‌ ಬಿರಾದರ್

ಕನ್ನಡಪ್ರಭ ವಾರ್ತೆ ಕೊಡೇಕಲ್

ಈ ಬಾರಿ ಮಳೆ ಮುಂಗಾರು ಮುನ್ನವೇ ಆರಂಭಗೊಂಡಿದ್ದು, ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿದೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಕಳೆದೊಂದು ವಾರದಿಂದ ಒಳಹರಿವು ಆರಂಭವಾಗಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಸಂತೋಷ ಇಮ್ಮಡಿಯಾಗಿದೆ.

ಕಳೆದ ಬಾರಿ ಮುಂಗಾರು ವಿಳಂಬ ಮತ್ತು ಪೂರ್ವ ಮುಂಗಾರು ಮಳೆ ಕೊರತೆಯಿಂದಾಗಿ ಹಾಗೂ ಬಿಸಿಲಿನ ತೀವ್ರತೆಗೆ ಆವಿಯಾಗುವಿಕೆ ಯಿಂದಾಗಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಕುಸಿತ ಕಂಡು ಡೆಡ್ ಸ್ಟೋರೇಜ್ ತಲುಪಿತ್ತು. ಇದರಿಂದಾಗಿ ಸಾಕಷ್ಟು ಗ್ರಾಮಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿತ್ತು.

ಆದರೆ, ಕಳೆದ ಕೆಲ ದಿನಗಳಿಂದ ಜಲಾಶಯಕ್ಕೆ ಸರಾಸರಿ 7 ಸಾವಿರ ಕ್ಯುಸೆಕ್‌ ದಿನಂಪ್ರತಿ ನೀರು ಹರಿದು ಬರುತ್ತಿದ್ದು, ಜಲಾಶಯ ಮತ್ತೆ ಜೀವಕಳೆ ಕಂಡಿದೆ. ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಭೀಕರ ಬರಗಾಲ ಹಾಗೂ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಈ ಬಾರಿ ಮುಂಗಾರು ಮಳೆ ಖುಷಿ ತಂದಿದೆ. ಜಲಾಶಯದಲ್ಲಿ ಕಳೆದ ಬಾರಿ ನೀರಿನ ಸಂಗ್ರಹವಿರದ ಕಾರಣ ಮುಂಗಾರು ಬೆಳೆಗೆ ವಾರಾಬಂದಿ ಅನುಸರಿಸಲಾಗಿತ್ತು. ಇನ್ನು ಹಿಂಗಾರು ಬೆಳೆಗಂತು ನೀರು ಬಿಟ್ಟಿರಲಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಸಂಕಷ್ಟ ಉಂಟುಮಾಡಿತ್ತು. ಆದರೆ, ಈ ಭಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಆದಷ್ಟು ಬೇಗ ಜಲಾಶಯ ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯಲಿ ಎಂಬುದು ರೈತಾಪಿ ವರ್ಗದ ಆಶಯವಾಗಿದೆ.

ಗರಿಗೆದರಿದ ಕೃಷಿಚಟುವಟಿಕೆಗಳು:

ರೈತರು ಈಗಾಗಲೇ ಹಲವೆಡೆ ಬಿತ್ತನೆ ಮಾಡಿದ್ದು, ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ದೂರದ ಲಿಂಗಸೂರು, ದೇವದುರ್ಗ, ಸಿಂದನೂರಿನಿಂದ ಬೀಜ ಖರೀದಿಸುತ್ತಿದ್ದಾರೆ. ತೊಗರಿ, ಹತ್ತಿ, ಮೆಣಸಿನಕಾಯಿ, ದ್ವಿದಳ ಧಾನ್ಯಗಳ ಬೇಡಿಕೆ ಹೆಚ್ಚಿದ್ದು, ಕಳೆದ ಬಾರಿಗಿಂತ ಈ ಬಾರಿ ರಸಗೊಬ್ಬರ ಹಾಗೂ ಬೀಜಗಳ ದರ ಹೆಚ್ಚಾಗಿ ರೈತರ ಜೇಬು ಸುಡುವಂತಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...