ಆಪತ್ತು ತರುವ ಕಾಯಿಲೆಗಳ ಮೂಲವೇ ಜೀವನ ಶೈಲಿ

KannadaprabhaNewsNetwork | Published : Feb 6, 2025 12:16 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜೀವಕ್ಕೆ ಆಪತ್ತು ತರುವ ಹಲವು ಕಾಯಿಲೆಗಳ ಮೂಲವೇ ನಮ್ಮ ಜೀವನ ಶೈಲಿಯಾಗಿದೆ. ಅಂತಹ ಕಾಯಿಲೆಗಳಲ್ಲಿ ಕ್ಯಾನ್ಸರ್ ಪ್ರಮುಖವಾಗಿದ್ದು, ಇದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜೀವಕ್ಕೆ ಆಪತ್ತು ತರುವ ಹಲವು ಕಾಯಿಲೆಗಳ ಮೂಲವೇ ನಮ್ಮ ಜೀವನ ಶೈಲಿಯಾಗಿದೆ. ಅಂತಹ ಕಾಯಿಲೆಗಳಲ್ಲಿ ಕ್ಯಾನ್ಸರ್ ಪ್ರಮುಖವಾಗಿದ್ದು, ಇದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ ತಿಳಿಸಿದರು.

ವಿಜಯಪುರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಜಿಲ್ಲಾ ಸಮೀಕ್ಷಾ ಘಟಕ ಇವರ ಸಂಯುಕ್ತಾಶ್ರಯಲ್ಲಿ ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನ ಆವರಣದಲ್ಲಿ ವಿಶ್ವ ಕ್ಯಾನ್ಸರ್ ದಿನವನ್ನು ಆಚರಣೆ ಮಾಡಲಾಯಿತು. ಈ ವೇಳೆ ಕ್ಯಾನ್ಸರ್‌ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾನ್ಯವಾಗಿ ಕ್ಯಾನ್ಸರ್ ಉಂಟು ಮಾಡುವ ಜೀವನ ಶೈಲಿಗಳಲ್ಲಿ ದುಶ್ಚಟವಾದ ಧೂಮಪಾನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ಧೂಮಪಾನ ಮಾಡುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ ಎಂದು ಅವರು ತಿಳಿಸಿದರು.

ಅಧಿಕ ತೂಕ ಮತ್ತು ಬೊಜ್ಜು ಸಹ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ನಮ್ಮ ದೈಹಿಕ ಚಟುವಟಿಕೆಯ ಕೊರತೆ ಕ್ಯಾನ್ಸರ್ ಅಪಾಯವನ್ನು ಜೀವನ ಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ದೈಹಿಕ ಚಟುವಟಿಕೆಗಳು ಬಹುತೇಕ ರೋಗಗಳನ್ನು ನಿಯಂತ್ರಿಸುತ್ತವೆ. ಹೀಗಾಗಿ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಪ್ರತಿಯೊಬ್ಬರೂ ವ್ಯಾಯಾಮ ಮಾಡಬೇಕು. ಯೋಗ, ನಡಿಗೆ, ಓಟ ಮತ್ತು ಈಜು ಸೇರಿದಂತೆ ದೈಹಿಕ ಶ್ರಮ ವಹಿಸಲು ಸಹಾಯಕವಾದ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದಿನನಿತ್ಯ ಆರೋಗ್ಯಕರ ಆಹಾರ ಸೇವಿಸುವುದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಒತ್ತಡದ ಜೀವನದಲ್ಲಿ ಮುಖ್ಯವಾಗಿ ದೈಹಿಕವಾಗಿ ಶ್ರಮಿಸುವುದನ್ನೇ ಮರೆತವರು ಯಾವುದೇ ಸ್ಥಿತಿಯಲ್ಲೂ ಸಹ ವ್ಯಾಯಾಮ, ವಾಕಿಂಗ್ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅಪ್ಪಾಸಾಹೇಬ ಇನಾಮದಾರ ಮಾತನಾಡಿ, ದುಶ್ಚಟದಿಂದ ದೂರ ಇರಿ. ನಿಯಮಿತವಾಗಿ ವೈದ್ಯರ ಬಳಿ ಭೇಟಿ ನೀಡಬೇಕು, ಮತ್ತು ಕ್ಯಾನ್ಸರ್ ತಪಾಸಣೆಗಳನ್ನು ನಿರಂತರವಾಗಿ ಮಾಡಿಸಬೇಕು. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚಿದಲ್ಲಿ ಮಾತ್ರ ಚಿಕಿತ್ಸೆ ಸುಲಭವಾಗಲಿದ್ದು, ಅನಗತ್ಯ ಭಯ ಬೇಡ. ಕ್ಯಾನ್ಸರ್‌ನಿಂದ ಗೆದ್ದವರು ಸಾಕಷ್ಟು ಜನ ನಮ್ಮ ಮಧ್ಯದಲ್ಲಿ ಇದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ಜಿಲ್ಲಾ ಮೇಲ್ವಿಚಾರಣಾಧಿಕಾರಿ ಮೋತಿಲಾಲ ಲಮಾಣಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ, ಜಿಲ್ಲಾ ಕಾರ್ಯಕ್ರಮ ಸಂಯೋಜಕ (ಎನ್.ಸಿ.ಡಿ ಘಟಕ) ಡಾ.ಪ್ರಿಯದರ್ಶನಿ ಪಾಟೀಲ, ನರ್ಸಿಂಗ್‌ ಕಾಲೇಜಿನ ಬೋಧಕ ಸಿಬ್ಬಂದಿಗಳು, ಐ.ಇ.ಸಿ ವಿಭಾಗದ ಗಣಕಯಂತ್ರ ಸಹಾಯಕ ಕುಮಾರ ರಾಠೋಡ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ, ವಿದಾರ್ಥಿನಿಯರು ಮುಂತಾದವರು ಉಪಸ್ಥಿತರಿದ್ದರು.

Share this article