ವಿಜಯಪುರ : ಇಂಧನ ಖಾಲಿಯಾಗಿ ಕಲಬುರಗಿಯಿಂದ ಬೆಳಗಾವಿಗೆ ಹೊರಟಿದ್ದ ಲಘು ವಿಮಾನ (ಜೆಟ್) ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ.
ರೆಡ್ ಬರ್ಡ್ ಎವಿಯೇಶನ್ ತರಬೇತಿ ಸಂಸ್ಥೆ ಉಪಯೋಗಿಸುತ್ತಿದ್ದ ಸೆಸ್ನಾ 172 ಟ್ಯಾಂಗೋ ಚಾರ್ಲಿ ವಿಮಾನ ಪತನಗೊಂಡು, ಗ್ರಾಮದ ಹೊರವಲಯದ ರೈತರ ಜಮೀನಿನಲ್ಲಿ ಬಿದ್ದಿದೆ. ಜೆಟ್ ಪ್ಲೈಟ್ ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಹಾಗೂ ತರಬೇತಿ ನಿರತ ಪೈಲಟ್ ಪಿ.ಆರ್.ಗೌತಮ್ ಶಂಕರ ವಿಮಾನದಲ್ಲಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ವಿಜಯಪುರ ಎಸ್.ಪಿ.ಲಕ್ಷ್ಮಣ ನಿಂಬರಗಿ ಹಾಗೂ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುದ್ದಿ ತಿಳಿದು ವಿಮಾನಯಾನ ಸಂಸ್ಥೆ ಸಿಬ್ಬಂದಿ ಕೂಡ ಆಗಮಿಸಿದ್ದಾರೆ.
ಕಲಬುರಗಿಯಿಂದ ಬೆಳಗಾವಿಯ ಏರ್‌ಪೋರ್ಟ್‌ಗೆ ಹೊರಟಿದ್ದಾಗ ಘಟನೆ ನಡೆದಿದೆ. ವಿಮಾನ ಹಂತ, ಹಂತವಾಗಿ ಕೆಳಗಿಳಿದು ಲ್ಯಾಂಡಿಂಗ್ ಮಾಡುವ ವೇಳೆ ಮುಗುಚಿ ಬಿದ್ದಿದೆ. ಕಲಬುರಗಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಡಿಜಿಸಿಎ ತಂಡ ಕೂಡ ಆಗಮಿಸಲಿದ್ದು, ಘಟನೆ ಕುರಿತು ತನಿಖೆ ನಡೆಸಲಿದೆ. ತನಿಖೆಯ ಬಳಿಕ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ.
ಮುಂಬೈ/ನವದೆಹಲಿ: ಶನಿವಾರ ವಿಜಯಪುರದ ಬಳಿ ಪತನವಾದ ಲಘು ವಿಮಾನದ ಮಾತೃಸಂಸ್ಥೆ ರೆಡ್‌ಬರ್ಡ್ ಫ್ಲೈಟ್ ತರಬೇತಿ ಅಕಾಡೆಮಿಯ ವಿಮಾನಗಳು ಈ ಹಿಂದೆಯೂ ಹಲವು ಬಾರಿ ಅಪಘಾತಕ್ಕೀಡಾಗಿದ್ದವು. ಕಾರ್ಯಕ್ಷಮತೆಯಲ್ಲಿ ಲೋಪವಿದ್ದ ಕಾರಣ ತಾತ್ಕಾಲಿಕವಾಗಿ ಅದರ ಕಾರ್ಯಾಚರಣೆಯನ್ನು ನಿಷೇಧಿಸಲಾಗಿತ್ತು ಎಂದು ತಿಳಿದುಬಂದಿದೆ.
2023ರ ಅಕ್ಟೋಬರ್‌ನಲ್ಲಿ ಒಂದು ವಾರದ ಅವಧಿಯಲ್ಲಿ 2 ವಿಮಾನಗಳು ಪತನವಾಗಿದ್ದವು. ಹಾಗಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಾತ್ಕಾಲಿಕವಾಗಿ ಅದರ ಎಲ್ಲ ಕಾರ್ಯಾಚರಣೆಗಳನ್ನು ನಿರ್ಬಂಧಿಸಿತ್ತು. ಈ ಅಕಾಡೆಮಿಗೆ ಸೇರಿದ ಕನಿಷ್ಠ 3 ಅಪಘಾತಗಳ ತನಿಖೆಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ನಡೆಸುತ್ತಿದೆ. ತನಿಖೆಯ ಪ್ರಾಥಮಿಕ ವರದಿಯನ್ನು ಡಿಜಿಸಿಎಗೆ ಸಲ್ಲಿಸಿದ್ದು, ‘ತನಿಖಾ ತಂಡ ಸ್ಥಳಕ್ಕೆ ಆಗಮಿಸುವ ಮೊದಲೇ ಎಸ್‌ಡಿ ಕಾರ್ಡ್, ಸಿಸಿಟಿವಿ ಹಾರ್ಡ್ ಡಿಸ್ಕ್‌ನಂತಹ ಮಹತ್ವದ ಸಾಕ್ಷ್ಯಗಳನ್ನು ತೆಗೆದುಹಾಕಲಾಗಿದೆ. ಅಕಾಡೆಮಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದೆ.