ನಸುಕಿನಲ್ಲಿ ಹದವಾಗಿ, ಮಧ್ಯಾಹ್ನದ ವೇಳೆಗೆ ಭೋರ್ಗರೆದ ಮಳೆ

KannadaprabhaNewsNetwork | Published : Jun 8, 2024 12:34 AM

ಸಾರಾಂಶ

ರಾತ್ರೋರಾತ್ರಿ ಜೋರು ಮಳೆಯಾಗಿ ತಗ್ಗು ಪ್ರದೇಶದ ಜನರು, ಮಣ್ಣಿನ ಗೋಡೆ, ಹೆಂಚಿನ ಮನೆಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿ, ನಿದ್ದೆ ಇಲ್ಲದಂತೆ ಮಾಡುತ್ತಿದ್ದ ಮಳೆರಾಯನ ಆರ್ಭಟ ಶುಕ್ರವಾರ ಮಧ್ಯಾಹ್ನವೇ ಶುರುವಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಸಿಲಿನ ತಾಪ, ಉಷ್ಣ ಗಾಳಿಯ ಕಹಿ ನೆನಪಿನಿಂದ ನಿಧಾನಕ್ಕೆ ಹೊರ ಬರುತ್ತಿರುವ ನಗರ, ಜಿಲ್ಲೆಯ ಜನತೆ ಮನ ಉಲ್ಲಾಸಗೊಳ್ಳುವಂತೆ ಬೆಳಗಿನ ಜಾವ ಹದ ಮಳೆಯಾದರೆ, ಶುಕ್ರವಾರ ಮಧ್ಯಾಹ್ನ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಜೋರು ಮಳೆಯಾಗುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ವರ್ಷದ ನಂತರ ಜೋರು ಮಳೆಯ ಅನುಭವ ಕಟ್ಟಿಕೊಟ್ಟಿತು.

ಕಳೆದ ಕೆಲವು ದಿನಗಳಿಂದ ರಾತ್ರೋರಾತ್ರಿ ಜೋರು ಮಳೆಯಾಗಿ ತಗ್ಗು ಪ್ರದೇಶದ ಜನರು, ಮಣ್ಣಿನ ಗೋಡೆ, ಹೆಂಚಿನ ಮನೆಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿ, ನಿದ್ದೆ ಇಲ್ಲದಂತೆ ಮಾಡುತ್ತಿದ್ದ ಮಳೆರಾಯನ ಆರ್ಭಟ ಶುಕ್ರವಾರ ಮಧ್ಯಾಹ್ನವೇ ಶುರುವಾಯಿತು. ನೋಡ ನೋಡುತ್ತಿದ್ದಂತೆ ದಟ್ಟ ಕಪ್ಪು ಮೋಡಗಳು ಬಾನಿನಲ್ಲಿ ನಿಧಾನವಾಗಿ ತೇಲಿ ಬರುವುದರೊಂದಿಗೆ ಜೋರು ಮಳೆಯ ಸುಳಿವು ನೀಡಿ, ಸುಮಾರು ಏಳೆಂಟು ನಿಮಿಷಗಳ ನಂತರ ಒಮ್ಮೆಗೆ ಒಂದೇ ರಭಸದಿಂದ ಮಳೆಯಾಗತೊಡಗಿತು.

ಜೋರು ಮಳೆ ಶುರುವಾಗುತ್ತಿದ್ದಂತೆಯೇ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತಾಯಿತು. ಅನೇಕರು ಮನೆ, ಅಂಗಡಿ, ಕಚೇರಿ ತಲುಪಲು, ಊರಿಗೆ ಬಸ್ಸು, ರೈಲನ್ನೇರುವ ತವಕದಲ್ಲಿದ್ದರು. ಮಳೆಯ ರಭಸದ ಮುಂದೆ ಬಹುತೇಕ ಕಡೆ ವಾಹನ ಸಂಚಾರ ಸ್ತಬ್ಧವಾಗಿತ್ತು. ಅಲ್ಲದೇ, ನೋಡ ನೋಡುತ್ತಿದ್ದಂತೆ ರಸ್ತೆಗಳು ನಿರ್ಜನವಾಗಿ, ರಸ್ತೆ ತುಂಬೆಲ್ಲಾ ಮಳೆ ನೀರು ರಭಸವಾಗಿ ಹರಿಯ ತೊಡಗಿತು. ವರ್ಷಗಳ ನಂತರ ಮತ್ತೆ ಈರುಳ್ಳಿ ಮಾರುಕಟ್ಟೆಯ ರೈಲ್ವೇ ಅಂಡರ್ ಬ್ರಿಡ್ಜ್, ಪಾಲಿಕೆ ಮುಂಭಾಗದ ರೈಲ್ವೇ ಅಂಡರ್ ಬ್ರಿಡ್ಜ್‌, ತ್ರಿಶೂಲ್ ಚಿತ್ರ ಮಂದಿರ ರಸ್ತೆ, ಕುವೆಂಪು ರಸ್ತೆ, ಪಿಬಿ ರಸ್ತೆ, ಜಾಲಿ ನಗರ, ನಿಟುವಳ್ಳಿ, ಬೇತೂರು ರಸ್ತೆ ಹೀಗೆ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಹರಿಯ ತೊಡಗಿತು.

ರೈಲ್ವೇ ಅಂಡರ್ ಬ್ರಿಡ್ಜ್‌ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಕೆಲವು ಕಡೆ ವಾಹನ ಸಂಚಾರಕ್ಕೆ ಬೇರೆ ಮಾರ್ಗ ಹಿಡಿದರೆ, ಮತ್ತೆ ಕೆಲವು ಕಡೆಗಳಲ್ಲಿ ದ್ವಿಚಕ್ರ ವಾಹನ, ಲಾರಿ, ಬಸ್ಸು, ಟ್ರ್ಯಾಕ್ಟರ್‌ನಂತಹ ವಾಹನಗಳನ್ನು ಅದೇ ನೀರಿನಲ್ಲೇ ಚಾಲಕರು ಚಾಲನೆ ಮಾಡಿಕೊಂಡು, ಹೋಗುತ್ತಿದ್ದುದು ಕಂಡು ಬಂದಿತು. ಮಳೆ ಹೆಚ್ಚಾದಂತೆಲ್ಲಾ ರಸ್ತೆಗಳ, ಕಟ್ಟಡಗಳ ಮೂಲಕ ಹರಿದು, ಚರಂಡಿಗೆ, ರಾಜ ಕಾಲುವೆಗೆ ಬರುತ್ತಿದ್ದ ನೀರಿನಿಂದಾಗಿ ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾದವು.

ಜಿಲ್ಲಾ ಕೇಂದ್ರದ ಹಳೆ ಭಾಗದ್ದು ಒಂದು ಸಮಸ್ಯೆಯಾದರೆ, ನಗರದ ಹೊರ ಭಾಗದಲ್ಲಿ ಹೊಸದಾಗಿ ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿ ಅದರಲ್ಲೂ ವಿಶೇಷವಾಗಿ ಖಾಸಗಿ ಬಡಾವಣೆ ಗಳಲ್ಲಿ ರಸ್ತೆ, ಚರಂಡಿ, ಒಳ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೇ ಮಳೆ ನೀರು ನಿಂತು, ಬಡಾವಣೆ ನಿವಾಸಿಗಳ ಪರದಾಟ ಮುಂದುವರಿದಿತ್ತು.

ಈಗಷ್ಟೇ ಶಾಲಾ-ಕಾಲೇಜುಗಳು ಪುನಾರಂಭವಾಗಿದ್ದು, ಸಂಜೆ ಶಾಲೆ ಬಿಡುವ ಹೊತ್ತಿನಲ್ಲೇ ಜೋರು ಮಳೆಯಾಗಿದ್ದರಿಂದ ಇದೇ ಮೊದಲ ಸಲ ಶಾಲೆಗೆ ಮಕ್ಕಳನ್ನು ಕಳಿಸಿದ ಪಾಲಕರು, ಕುಟುಂಬದ ಹಿರಿಯರು ಮಳೆಯಲ್ಲಿ ಮಕ್ಕಳು ನೆನೆಯದೇ ವಾಪಾಸ್ಸು ಕರೆ ತರುವ ಪ್ರಯತ್ನದಲ್ಲಿದ್ದರು. ಇನ್ನು ಅನೇಕ ಕಡೆ ಮಳೆ ನಿಲ್ಲುವುದನ್ನು ಕಾಯುತ್ತಿದ್ದವರಂತೆ ಮಕ್ಕಳು ಮಳೆ ನೀರಿನೊಂದಿಗೆ ಆಟವಾಡಿದರು. ಜೋರು ಮಳೆಯಿಂದಾಗಿ ತಳ್ಳುಗಾಡಿ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಸ್ಥರು, ಫುಟ್‌ಪಾತ್ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸಿದರು.

ಕಳೆದ ತಡರಾತ್ರಿ ಸುರಿದ ಹದ ಮಳೆಯಿಂದಾಗಿ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡರು. ಕೆಲ ವಾರಗಳ ಹಿಂದೆ ತೋಟದ ಬೆಳೆಗಳನ್ನು, ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ರೈತರು ಹದವಾದ ಮಳೆ, ಮಧ್ಯಾಹ್ನದ ನಂತರ ಸುರಿದ ಜೋರು ಮಳೆಯಿಂದಾಗಿ ಸಂತೃಪ್ತರಾದರು.

Share this article