ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಶನಿವಾರ ನಸುಕಿನ ಜಾವದಿಂದ ಅಲ್ಲಲ್ಲಿ ಗುಡುಗು, ಮಿಂಚು, ಸಿಡಿಲ ಸಹಿತ ಸಾಧಾರಣ ಹಾಗೂ ಧಾರಾಕಾರ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬಗಳಲ್ಲಿ ನಸುಕಿನಿಂದಲೇ ಗುಡುಗು, ಮಿಂಚು, ಸಿಡಿಲಿನಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಮಂಗಳೂರಿನ ಅಲ್ಲಲ್ಲಿ ಧಾರಾಕಾರ ಮಳೆ ಸುರಿದಿದೆ. ಸಿಡಿಲಬ್ಬರಕ್ಕೆ ವಿದ್ಯುತ್ ಕಡಿತಗೊಂಡಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯೇ ಭಾರಿ ಗಾಳಿಗೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಂಡಿದೆ.
ಮಂಗಳೂರಿನ ಅಂಬೇಡ್ಕರ್ ವೃತ್ತ ಬಳಿ ಭಾರಿ ಗಾತ್ರದ ಮರ ನೆಲಕ್ಕೆ ಉರುಳಿದ ಕಾರಣ ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಜಖಂಗೊಂಡಿದೆ. ವಾಹನದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ಪಾಂಡೇಶ್ವರದ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ.ಶುಕ್ರವಾರ ರಾತ್ರಿಯಿಂದಲೇ ಮಳೆ ಕಾಣಿಸಿದ್ದು, ಬೆಳ್ತಂಗಡಿಯ ಸೋಮಂತಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದೆ. ಇಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮಣ್ಣು ರಸ್ತೆಗೆ ಬಂದು ಸಂಚಾರಕ್ಕೆ ಅಡಚಣೆಯಾಗಿತ್ತು. ಸುಳ್ಯದ ಕಲ್ಮಡ್ಕದಲ್ಲಿ ಅಬ್ಬಾಸ್ ಎಂಬವರ ಮನೆಗೆ ಸಿಡಿಲು ಬಡಿದು ಹಟ್ಟಿಯಲ್ಲಿದ್ದ ಕರು ಬಲಿಯಾಗಿದೆ. ಮನೆಯ ವಯರಿಂಗ್, ಸ್ವಿಚ್ ಬೋರ್ಡ್ ಸಂಪೂರ್ಣ ಸುಟ್ಟುಹೋಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಇಡೀ ದಿನ ಮೋಡ:ದ.ಕ.ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಸಂಜೆ ವರೆಗೆ ಇಡೀ ದಿನ ಮೋಡ ಮುಸುಕಿದ ವಾತಾವರಣ ಕಂಡುಬಂದಿದೆ. ಬಿರು ಬೇಸಗೆಯ ಈ ದಿನಗಳಲ್ಲಿ ಇದೇ ಮೊದಲ ಬಾರಿಗೆ ದಿನಪೂರ್ತಿ ಮೋಡದ ಕಾರಣದಿಂದ ವಾತಾವರಣದಲ್ಲಿ ತುಸು ತಂಪನೆಯ ಅನುಭವ ಉಂಟಾಗಿದೆ.