ಶಹಾಪುರ : ಸಿಡಿಲು ಬಡಿದು ಕುರಿಗಾಹಿ, 17 ಕುರಿಗಳ ಸಾವು

KannadaprabhaNewsNetwork | Updated : May 14 2024, 08:57 AM IST

ಸಾರಾಂಶ

ವಿಭೂತಿಹಳ್ಳಿಯಲ್ಲಿ ಘಟನೆ । ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ । ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ

  ಶಹಾಪುರ :  ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟಿದ್ದು, ಏಳು ಕುರಿಗಳು ಅಸುನೀಗಿರುವ ಘಟನೆ ಜರುಗಿದೆ.

ವಿಭೂತಿಹಳ್ಳಿ ಗ್ರಾಮದ ಗೋವಿಂದಪ್ಪ (22) ಮೃತ ಕುರಿಗಾಹಿ. ಗ್ರಾಮದ ಮಹ್ಮದ್ ಕಾಶಿಮ್ ಅವರ ಜಮೀನಿನಲ್ಲಿ ಹಾಕಿರುವ ಕುರಿ ಹಟ್ಟಿಯಲ್ಲಿ ಮಲಗಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಟ್ಟಿಯಲ್ಲಿದ್ದ 7 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ನನ್ನ ಮಗನಿಗೆ ಮದುವೆ ಮಾಡಿ ಎರಡು ವರ್ಷವಾಗಿದೆ. ದುಡಿದು ಹಾಕುವ ಮಗನೇ ಹೋದ ಮೇಲೆ ನಮ್ಮ ಗತಿ ದೇವರೇ ಬಲ್ಲ. ನಾವು ಯಾರಿಗೋಸ್ಕರ ಬದುಕಬೇಕು. ಅಯ್ಯೋ ದೇವರೇ ಮಗನ ಸಾವು ನೋಡಲು ನಮ್ಮನ್ನು ಬದುಕಿಸಿದೆಯಾ ಎಂದು ಹೆತ್ತ ತಾಯಿ ಹಾಗೂ ಹೆಂಡತಿಯ ಆಕ್ರಂದನ ಮುಗಿಲು ಮುಟ್ಟಿತು. ಸೇರಿದ್ದ ಜನರ ಕಣ್ಣುಗಳು ಒದ್ದೆಯಾಗಿದ್ದವು.

ಪರಿಹಾರಕ್ಕಾಗಿ ಒತ್ತಾಯ: ವಿಭೂತಿಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾದ ಯುವಕನ ಕುಟುಂಬ ಬಡತನದಲ್ಲಿದ್ದು ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯುವಕ ಮೃತಪಟ್ಟಿದ್ದರಿಂದ ಆ ಕುಟುಂಬ ಬೀದಿಗೆ ಬಂದಿದೆ. ಕುಟುಂಬಕ್ಕೆ 20 ಲಕ್ಷ ರು. ಪರಿಹಾರ ಹಾಗೂ ಪ್ರತಿ ಕುರಿಗೆ 25 ಸಾವಿರ ರು. ಪರಿಹಾರ ಧನ ನೀಡಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಗ್ರಾಮದ ಮುಖಂಡ ಪರ್ವತ ರೆಡ್ಡಿ ವಿಭೂತಿಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಐಕೂರು ಗ್ರಾಮದಲ್ಲಿ ಸಿಡಿಲಿಗೆ 10 ಕುರಿಗಳ ಬಲಿ: ವಡಗೇರಾ ತಾಲೂಕಿನ ಐಕೂರು ಗ್ರಾಮದ ಸಾಬಣ್ಣ ಮುಂಡರಗಿ ಅವರಿಗೆ ಸೇರಿದ 10 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ.

ಶಹಾಪುರ 24 ಮಿಮೀ ಮಳೆ: ಶಹಾಪುರ ತಾಲೂಕಿನಲ್ಲಿ ಸೋಮವಾರ ಬೆಳಗಿನ ಜಾವ ಶಹಾಪುರ-24, ದೋರನಹಳ್ಳಿ-40, ಭೀ. ಗುಡಿ- 25, ಗೋಗಿ-24, ಹತ್ತಿಗೂಡೂರ 01 ಮಿಮೀ ನಷ್ಟು ಮಳೆ ಸುರಿದಿದೆ.

ಪ್ರಕೃತಿ ವಿಕೋಪದ ಅಡಿಯಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ವ್ಯಕ್ತಿಗೆ ಸರ್ಕಾರದಿಂದ 5 ಲಕ್ಷ ರು. ಪರಿಹಾರ ಧನ ಹಾಗೂ ಸಿಡಿಲಿಗೆ ಬಲಿಯಾದ ಪ್ರತಿ ಕುರಿಗೆ 4 ಸಾವಿರ ರು. ನೀಡಲು ಅವಕಾಶವಿದ್ದು, ಆದಷ್ಟು ಬೇಗ ಆ ಕುಟುಂಬಕ್ಕೆ ಪರಿಹಾರ ಧನ ವಿತರಿಸಲಾಗುವುದು.

-ಉಮಕಾಂತ ಹಳ್ಳೆ, ತಹಸೀಲ್ದಾರ್ ಶಹಾಪುರ

ಸಿಡಿಲಿಗೆ ಬಲಿಯಾದ ಕುರಿಗಳಿಗೆ ಅನುಗ್ರಹ ಯೋಜನೆ ಅಡಿಯಲ್ಲಿ ಪ್ರತಿ ಕುರಿಗೆ 5 ಸಾವಿರ ರು. ಪರಿಹಾರ ಧನ ನೀಡಲು ಅವಕಾಶವಿದೆ. ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

-ಡಾ. ಷಣ್ಮುಖಪ್ಪ ಗೊಂಗಡಿ, ಸಹಾಯಕ ನಿರ್ದೇಶಕರು ಪಶು ಸಂಗೋಪನೆ ಇಲಾಖೆ ಶಹಾಪುರ

Share this article