ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಒಬ್ಬ ತಾಯಿ ತಾನು ಮೊದಲ ಮಗುವಿಗೆ ಜನ್ಮ ನೀಡುವಾಗ ಅನುಭವಿಸುವ ನೋವು ಹಾಗೂ ಸಂಕಟದ ವೇದನೆಯನ್ನು ಒಬ್ಬ ಸಾಹಿತಿ ಪ್ರತಿ ಪುಸ್ತಕ ಬರೆಯುವಾಗ ಅನುಭವಿಸುತ್ತಾನೆ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಭಾನುವಾರ ಸಹ್ಯಾದ್ರಿ ಕಲಾ ಕಾಲೇಜು, ಗೀತಾಂಜಲಿ ಪ್ರಕಾಶನ, ಶಿಕಾರಿಪುರ ಸುವ್ವಿ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಸಾಹಿತಿ ಡಾ.ಮೋಹನ ಚಂದ್ರಗುತ್ತಿ ಅವರ ''''''''ಹಸೆ ಚಿತ್ತಾರ'''''''' ಹಾಗೂ '''''''' ಹೆಚ್ಚೆಯ ಶಿವಪ್ಪ ಮಾಸ್ತಾರ್ ಅವರ ಡೊಳ್ಳಿನ ಪದಗಳು'''''''' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯ ಸಂಬಂಧಗಳ ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದಾನೆ. ಆದರೆ, ವೇದನೆ ಹಾಗೂ ಸಂವೇದನೆಗಳನ್ನು ದಾಖಲಿಸಿಡಲು ಹೊರಟಿರುವುದು ದೊಡ್ಡ ಸಾಧನೆ. ಪುಸ್ತಕಗಳ ಪ್ರಕಾಶಕರಲ್ಲಿ ಕೆಲವು ಸಮಸ್ಯೆಗಳು ಕಾಡುತ್ತಿದೆ. ಇಲ್ಲಿ ಪುಸ್ತಕ ಮಾರಾಟವಾಗಿಲ್ಲ ಎನ್ನುವುದು ಸಮಸ್ಯೆಯಲ್ಲ. ಆದರೆ, ಹೇಳಲು ಹೊರಟಿರುವ ವಿಚಾರಗಳಿಂದ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ ಎಂದರು.ಶ್ರಮ ಜೀವಿಗಳಲ್ಲಿ ಜನಪದ ಕಲೆ, ಸಂಸ್ಕ್ರತಿ ಕಾಣಲು ಸಾಧ್ಯ:
ಜಾನಪದ ತಜ್ಞ ಡಾ.ಜಿ.ಸಣ್ಣಹನುಮಪ್ಪ ಮಾತನಾಡಿ, ಮೋಹನ್ ಚಂದ್ರಗುತ್ತಿ ಅವರು ದಾಖಲಿಸಿರುವ ಡೊಳ್ಳಿನ ಪದಗಳು ಶಿವಪ್ಪ ಮಾಸ್ತಾರರ ಸ್ವಂತ ರಚನೆ. ಡೊಳ್ಳು ಹಾಲುಮತ ಸಮುದಾಯದ ಆರಾಧ್ಯ ದೈವ. ಇದನ್ನು ಮಲೆನಾಡಿನ ದೀವರು ಅತ್ಯಂತ ಪ್ರೀತಿಯಿಂದ ಗೌರವಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ ಎಂದರು. ಉಳ್ಳವರು ಹಾಗೂ ಮೇಲ್ವರ್ಗದ ಸಮುದಾಯಗಳಲ್ಲಿ ಜನಪದ ಪರಂಪರೆ ಕಾಣಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಉಳ್ಳವರು ಶಿಷ್ಟ ಪರಂಪರೆ ಮಾತ್ರ ಗೌರವಿಸುವುದು. ಜನಪದ ಕಲೆ, ಸಂಸ್ಕ್ರತಿ ಶ್ರಮ ಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ದುಡಿಯುವ ವರ್ಗಗಳಲ್ಲಿ ಮಾತ್ರ ಅದ್ಬುತವಾದ ಜನಪದ ಸಂಪತ್ತು, ಸಿರಿವಂತಿಕೆ ಇರುತ್ತದೆ. ಈ ಆಯಾಮದಲ್ಲಿ ಶ್ರಮ ಜೀವಿಗಳಾಗಿ ರೇಣುಕಮ್ಮ ಹಾಗೂ ಶಿವಪ್ಪ ಮಾಸ್ತಾರ್ ಸೇರುತ್ತಾರೆ ಎಂದರು.ಸಾಹಿತಿ ಮೋಹನ ಚಂದ್ರಗುತ್ತಿ ಮಾತನಾಡಿ, ಹೆಚ್ಚೆಯ ಶಿವಪ್ಪ ಮಾಸ್ತಾರ್ (ತಂದೆ) ಅವರ 40 ಡೊಳ್ಳಿನ ಹಾಡುಗಳ ಸಂಗ್ರಹ ಈ ಪುಸ್ತಕ ಒಳಗೊಂಡಿದೆ. ಅವರು, ಕೋಲಾಟ, ಲಾವಣಿ ಸೇರಿ ಸ್ವತಃ ಭಾಗವತರಾಗಿ 12 ಕ್ಕೂ ಹೆಚ್ಚು ದೊಡ್ಡಾಟ ಹಾಗೂ ಸಣ್ಣಾಟಗಳ ಹಾಡುಗಳ ಬರೆದು ಹಾಡಿದ್ದಾರೆ ಎಂದರು.
ಮಾಸ್ತಾರ್ ಅವರಿಗೆ ಸ್ಥಳದಲ್ಲಿಯೇ ಜನಪದ ಹಾಡುಗಳನ್ನು ಕಟ್ಟಿ, ಹಾಡುವ ಶ್ರಮತೆ ಇತ್ತು. ಆದರೆ, ವಿಪರ್ಯಾಸ ಮಾಸ್ತಾರ್ ಅವರು, ಮುಖ್ಯ ವಾಹಿನಿಗೆ ಬರಲು ಯಾವುದೇ ವೇದಿಕೆ ಸಿಗಲಿಲ್ಲ. ಇದರಿಂದ, ಕೊನೆಯವರೆಗೆ ಶಾಪಗ್ರಸ್ಥ ಗಾಂಧರ್ವರಾಗಿ ಉಳಿದುಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.''''''''ಹಸೆ ಚಿತ್ತಾರ'''''''' ಪುಸ್ತಕ ಬಿಡುಗಡೆಗೊಳಿಸಲು 2003ರಿಂದ ಹರಸಾಹಸ ಪಟ್ಟಿದ್ದೇನೆ. ಆದ್ದರಿಂದ, ಇಲ್ಲಿ ಪುಸ್ತಕಗಳ ಹೊರತರಲು ಅನೇಕ ಸವಾಲುಗಳು ಎದುರಿಸಿದ್ದೇನೆ. ನನ್ನ ಅವ್ವ( ರೇಣುಕಮ್ಮ ಶಿವಪ್ಪ ಮಾಸ್ತಾರ್) ಕೂಡ ದೊಡ್ಡ ಕಲಾವಿದೆ.
ಸಮಾರಂಭದಲ್ಲಿ ಮೋಹನ್ ಚಂದ್ರ ಗುತ್ತಿ ಅವರ ತಾಯಿ ರೇಣುಕಮ್ಮ ಶಿವಪ್ಪ ಮಾಸ್ತಾರ್, ಸುಮಿತ್ರ ಮೋಹನ್ ಚಂದ್ರಗುತ್ತಿ, ಗೀತಾಂಜಲಿ ಪ್ರಕಾಶನದ ಜಿ.ಬಿ.ಟಿ.ಮೋಹನ್,ಸುವ್ವಿ ಪ್ರಕಾಶನದ ಬಿ.ಎನ್.ಸುನಿಲ್ ಕುಮಾರ್, ಅಣ್ಣಪ್ಪ ಮಳೀಮಠ, ಟಿ.ಶೃಂಗಶ್ರೀ ಇದ್ದರು.ಅವ್ವ ಗರ್ಭಿಣಿ ಆಗಿದ್ದಾಗಲೇ ಕಾದಂಬರಿಗಳ ಓದುತ್ತ, ನನಗೆ ಸಾಹಿತ್ಯದ ಅರಿವು ಮೂಡಿಸಿದಳು. ವಿಚಿತ್ರವೆಂದರೆ, ನಾನು ಜನಿಸಿದಾಗ ನನ್ನ ಮನೆಯಲ್ಲಿ ಹಿಡಿಯಷ್ಟು ಅನ್ನ ಇರಲಿಲ್ಲ. ಆದರೆ, ಇದು ನನಗೆ ಕೊರತೆಯಾಗಿ ಕಾಣಕೂಡದು ಎಂದು ಅಕ್ಷರ ಕಲಿಸಿ, ಸ್ವಾಭಿಮಾನದ ನೆಲೆಯನ್ನು ರೂಪಿಸಿ ಸುಂದರ ಬದುಕನ್ನು ಕಲ್ಪಿಸಿಕೊಟ್ಟಳು.ಮೋಹನ ಚಂದ್ರಗುತ್ತಿ, ಸಾಹಿತಿ
ಬಂಗಾರಪ್ಪ, ಕಾಗೋಡು ಸಾಂಸ್ಕೃತಿಕ ನಾಯಕರು: ಸಣ್ಣ ಹನುಮಪ್ಪಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಲೆನಾಡಿನ ಈಡಿಗ ಸಮುದಾಯಕ್ಕೆ ಸಾಂಸ್ಕೃತಿಕ ನಾಯಕರು ಎಂದು ಜಾನಪದ ತಜ್ಞ ಡಾ.ಜಿ.ಸಣ್ಣಹನುಮಪ್ಪ ಹೇಳಿದರು. ದೀವರಿಗೆ ಬಹುದೊಡ್ಡ ಸಾಂಸ್ಕೃತಿಕ ಪರಂಪರೆ ಇಲ್ಲ. ಅಂದರೆ, ಇಲ್ಲಿ, ದೀವರಿಗೆ (ಈಡಿಗ) ಸಾಂಸ್ಕೃತಿಕ ಕಥಾ ನಾಯಕ ಇಲ್ಲ. ಇತಿಹಾಸದ ಕುಮಾರ ರಾಮನ ಹಾಡು, ಧ್ಯಾನ, ಪೂಜೆಯನ್ನು ದೀವರು ಆರಾಧನೆ ಮಾಡುತ್ತಿದ್ದಾರೆ ಎಂದರು. ಇಲ್ಲಿ ಚಾರಿತ್ರಿಕ ನೆಲೆಗಟ್ಟಿನಲ್ಲಿ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪರ ಭಾವಚಿತ್ರವನ್ನು ದೇವರ ಕೋಣೆಯಲ್ಲಿ ಇರಿಸಿ ಆರಾಧಿಸಬೇಕಾಗಿದೆ ಎಂದರು.
--------