ಔಷಧದ ಅಂಗಡಿಯಲ್ಲಿ ಅನೇಕ ಔಷಧಗಳಿರುತ್ತವೆ. ಆದರೆ ಎಲ್ಲವೂ ನಾವು ಸೇವಿಸಲು ಇರುವುದಲ್ಲ. ಹಾಗೆಯೇ ಸೃಷ್ಟಿಯಲ್ಲಿ ಅನೇಕ ಬಗೆಯ ಆಹಾರವಿದೆ.
ಗೋಕರ್ಣ: ಪ್ರಿಯ ಹಾಗೂ ಹಿತ ಆಹಾರಗಳ ವ್ಯತ್ಯಾಸವನ್ನು ಗಮನಿಸಿ ಸ್ವೀಕರಿಸಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಶುಕ್ರವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಮಗುವಿಗೆ ಹಿತವಲ್ಲದ ಆಹಾರವನ್ನು ತಾಯಿ ಅಡುಗೆ ಮನೆಯಲ್ಲಿ ಕಾಣದಂತೆ ಅಡಗಿಸಿಡುವಂತೆ, ಪ್ರಕೃತಿಯು ಜೀವಿಗೆ ಹಿತವಲ್ಲದ ಆಹಾರಗಳನ್ನು ನಮ್ಮಿಂದ ಆದಷ್ಟು ದೂರವಿಟ್ಟಿರುತ್ತದೆ. ನಮಗೆ ಹಿತವಾದದ್ದು ರಮಣೀಯವಾದರೆ, ಪ್ರಿಯ ಆಹಾರವನ್ನು ಮರಣೀಯ ಎನ್ನಬಹುದು ಎಂದರು.
ಔಷಧದ ಅಂಗಡಿಯಲ್ಲಿ ಅನೇಕ ಔಷಧಗಳಿರುತ್ತವೆ. ಆದರೆ ಎಲ್ಲವೂ ನಾವು ಸೇವಿಸಲು ಇರುವುದಲ್ಲ. ಹಾಗೆಯೇ ಸೃಷ್ಟಿಯಲ್ಲಿ ಅನೇಕ ಬಗೆಯ ಆಹಾರವಿದೆ. ಆದರೆ ಎಲ್ಲವೂ ನಮಗೆ ಸೂಕ್ತವಲ್ಲ. ನಮಗೆ ಸೂಕ್ತವಾದ ಆಹಾರವನ್ನು ಆಯುರ್ವೇದದಲ್ಲಿ ಹಿತಾಹಾರ ಎನ್ನಲಾಗಿದ್ದು, ಪ್ರಕೃತಿ ನಮಗಾಗಿ ಕೊಟ್ಟಿರುವುದನ್ನು ನಿಹಿತ ಎಂದರೆ, ಶಾಸ್ತ್ರಗಳು ಸೂಚಿಸಿರುವುದನ್ನು ವಿಹಿತ ಎಂದು ಕರೆಯಲಾಗಿದೆ ಎಂದು ಹಿತ- ಅಹಿತ ಆಹಾರಗಳ ಕುರಿತಾಗಿ ವಿವರಿಸಿದರು.ಸಿಕ್ಕಿದ್ದನ್ನು ಸಿಕ್ಕಂತೆ ತಿನ್ನುವುದು ಮನುಷ್ಯನ ಸ್ವಭಾವವಲ್ಲ. ಸೂಕ್ತವಾದ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ, ಪದಾರ್ಥಗಳಲ್ಲಿನ ದೋಷಗಳನ್ನು ತೆಗೆದು, ಹಿತವಾದ ಪಾಕವನ್ನು ಮಾಡಿ ಸೇವಿಸುವುದು ಮನುಷ್ಯನ ಪ್ರವೃತ್ತಿಯಾಗಿದೆ. ಪ್ರಕೃತಿಯನ್ನು ಮಾರ್ಪಡಿಸಿಕೊಳ್ಳುವ ವಿಶೇಷ ಅವಕಾಶವನ್ನು ನಮಗೆ ದೇವರು ಕೊಟ್ಟಿದ್ದಾನೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದರು.ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಶ್ರೀಮಠದ ಮಾಜಿ ಸಿಇಒ ಕೆ.ಜಿ. ಭಟ್, ಈಶ್ವರೀ ಬೇರ್ಕಡವು, ವಾದಿರಾಜ ಸಾಮಗ, ಮಂಜುನಾಥ ಭಟ್, ಚಂಪಕಾ ಭಟ್, ಸ್ವಾತಿ ಭಾಗ್ವತ್, ವೇಣು ನವಿಲಗೋಣ, ಸದಾನಂದ ಹೆಬ್ಬಾರ್, ದಿನಪ್ರಧಾನರಾಗಿ ರಾಧಾಕೃಷ್ಣ ಬಂದಗದ್ದೆ ದಂಪತಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.