ಅಂಬೇಡ್ಕರ್ ಜೀವನದಂತೆ ವಕೀಲರ ಜೀವನವೂ ಒಂದು ಹೋರಾಟ

KannadaprabhaNewsNetwork |  
Published : Apr 30, 2025, 12:37 AM IST
ಫೋಟೋ 29hsd3: ವಕೀಲರ ಸಂಘದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್‍ರವರ 134 ನೇ ಜಯಂತಿಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದರೋಣ ವಾಸುದೇವ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.  | Kannada Prabha

ಸಾರಾಂಶ

ವಕೀಲರ ಸಂಘದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ ಅವರ 134ನೇ ಜಯಂತಿಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನ್ಯಾ.ರೋಣ ವಾಸುದೇವ್ ಅಭಿಮತ । ಚಿತ್ರದುರ್ಗ ವಕೀಲರ ಸಂಘದಿಂದ ಅಂಬೇಡ್ಕರ್‌ ಜಯಂತಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದೇಶಕ್ಕೆ ಸುಭದ್ರವಾದ ಸಂವಿಧಾನವನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಜೀವನದಂತೆ ನಮ್ಮ ವಕೀಲರ ಜೀವನವೂ ಒಂದು ಹೋರಾಟ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹೇಳಿದರು.

ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ 134ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರ ವೃತ್ತಿಯೆಂದರೆ ಕಕ್ಷಿದಾರರಿಗೆ ನ್ಯಾಯ ಕೊಡಿಸುವಲ್ಲಿ ಹೋರಾಡಬೇಕು. ಜ್ಞಾನವೇ ಬಂಡವಾಳವಾಗಬೇಕು. ಸರಿಯಾದ ರೀತಿಯಲ್ಲಿ ಹೋರಾಟವಿರಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮಾದರಿಯನ್ನಾಗಿಟ್ಟುಕೊಳ್ಳಿ. ನಮ್ಮ ದೇಶದ ಸಂವಿಧಾನ ಸುಭದ್ರವಾಗಿರುವುದರಿಂದ ಶಾಸಕಾಂಗ

ಕಾರ್ಯಾಂಗ, ನ್ಯಾಯಾಂಗ ಈ ಮೂರು ಅಂಗಗಳಲ್ಲಿ ಯಾವ ಅಂಗವೂ ಮತ್ತೊಂದು ಅಂಗದ ಮೇಲೆ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವಿಲ್ಲ. ಬೇರೆ ದೇಶಗಳಲ್ಲಿ ಭದ್ರವಾದ ಸಂವಿಧಾನವಿಲ್ಲದ ಕಾರಣ ಪ್ರಧಾನಿಯನ್ನು ಅಧಿಕಾರದಿಂದ ಯಾವಾಗ ಬೇಕಾದರೂ ಓಡಿಸುತ್ತಾರೆ. ರಾಷ್ಟ್ರಪತಿಯನ್ನು ಇಳಿಸಿ ಸೇನಾಧಿಪತಿಗಳು ಆಡಳಿತ ನಡೆಸುವುದರಿಂದ ಅರಾಜಕತೆಯುಂಟಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಛಾಪು ಮೂಡಿಸಲು ಸಂವಿಧಾನ ಸುಭದ್ರವಾಗಿರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅಳೆದು ತೂಗಿ ವಿದೇಶಗಳಲ್ಲಿ ಸುತ್ತಾಡಿಕೊಂಡು ಬಂದ ನಂತರ ಸಂಶೋಧನೆ ನಡೆಸಿ ಶಬ್ದಗಳನ್ನು ಬಳಸಿದ್ದಾರೆ. ವೈವಿಧ್ಯಮಯ ದೇಶ ನಮ್ಮದು. ಸಂವಿಧಾನಕ್ಕೆ ವಿಧೇಯರಾಗಿ ಸೇವೆ ಸಲ್ಲಿಸಿ ಎಂದು ವಕೀಲರುಗಳಿಗೆ ಕರೆ ನೀಡಿದರು.

1ನೇ ಅಪರ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ ಅವರು ಕೆಳ ಜಾತಿಯವರಿಗಷ್ಟೆ ಸಂವಿಧಾನ ರಚಿಸಿಲ್ಲ. ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದಾರೆ. ಬಾಲ್ಯದಲ್ಲಿಯೇ ಅನೇಕ ಕಷ್ಟ, ಅವಮಾನ, ಹಿಂಸೆಗಳನ್ನು ಅನುಭವಿಸಿದ್ದರಿಂದಲೇ ದೇಶಕ್ಕೆ ಭದ್ರವಾದ ಸಂವಿಧಾನ ನೀಡಲು ಸಾಧ್ಯವಾಯಿತು. ದೊಡ್ಡ ದೊಡ್ಡ ಹುದ್ದೆಗಳನ್ನು ತ್ಯಜಿಸಿ ದಲಿತರ ಬದುಕು ಹಸನುಗೊಳಿಸಲು ಹೋರಾಡಿದರು. ಶಿಕ್ಷಣ, ಸಂಘಟನೆ, ಹೋರಾಟ ಅವರ ಮೂಲ ಮಂತ್ರವಾಗಿತ್ತು ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡುತ್ತ ವಕೀಲರು ಹೋರಾಟದ ಮಜಲುಗಳನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಂದ ಕಲಿಯಬೇಕು. ಹಕ್ಕು, ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಪ್ರತಿಯೊಬ್ಬರು ಹೋರಾಡಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ಅಸಮಾನತೆ, ಹಕ್ಕುಗಳ ನಿರಾಕರಣೆಯಿತ್ತು. ಇಡಿ ಜಗತ್ತು ಭಾರತದ ಸಂವಿಧಾನದ ಕಡೆ ತಿರುಗಿ ನೋಡುತ್ತಿದೆ. ಭದ್ರವಾದ ಸಂವಿಧಾನವಿದ್ದರೂ ದೇಶದಲ್ಲಿ ಭಯದ ವಾತಾವರಣವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಮತ ಡಿ. ವಕೀಲರ ಸಂಘದ ಉಪಾಧ್ಯಕ್ಷ .ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಇವರುಗಳು ವೇದಿಕೆಯಲ್ಲಿದ್ದರು.

ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ, 1ನೇ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚೈತ್ರ, 2ನೇ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಶ್ಮಿ ಎಸ್.ಮರಡಿ, 1ನೇ ಅಪರ ಸಿವಿಲ್ ನ್ಯಾಯಾಧೀಶರಾದ ಅನಿತಕುಮಾರಿ, 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಹನ ಆರ್. ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಕೆ.ರಹಮತ್‍ವುಲ್ಲಾ, ವಿಜಯಕುಮಾರ್, ಎಸ್.ಬಿ.ವಿಶ್ವನಾಥ್ ಸೇರಿದಂತೆ ನೂರಾರು ವಕೀಲರುಗಳು ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ