ಕ್ರಿಕೆಟ್, ಕಬಡ್ಡಿಯಂತೆ ಖೋ-ಖೋಗೂ ಮಾನ್ಯತೆ ಹೆಚ್ಚು: ಎಂ.ಎಸ್. ತ್ಯಾಗಿ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

ಕ್ರಿಕೆಟ್, ಕಬಡ್ಡಿ ಹಾಗೂ ಫುಟ್‌ಬಾಲ್ ಆಟಗಳಂತೆ ಖೋ-ಖೋ ಪಂದ್ಯಾವಳಿ ದೇಶ ವಿದೇಶಗಳಲ್ಲಿಯೂ ಅತಿ ಹೆಚ್ಚು ಮಾನ್ಯತೆ ಪಡೆದುಕೊಂಡಿದೆ. ಪ್ರಧಾನಿ ಮೋದಿ ಅವರು ದೇಶೀಯ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಐಪಿಎಲ್ ಹಾಗೂ ಕಬಡ್ಡಿ ಪ್ರೀಮಿಯಂ ಲೀಗ್ ಪಂದ್ಯಾವಳಿ ಮಾದರಿಯಲ್ಲಿ ಖೋ-ಖೋ ಪಂದ್ಯಾವಳಿಯು ಒಡಿಶಾ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಆಯೋಜನೆಯಾಗಲಿದೆ ಎಂದು ರಾಷ್ಟ್ರೀಯ ಖೋ-ಖೋ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಂ.ಎಸ್. ತ್ಯಾಗಿ ತಿಳಿಸಿದರು

ಕಲ್ಪತರು ನಾಡು ತಿಪಟೂರಿನಲ್ಲಿ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ಚಾಲನೆಕನ್ನಡಪ್ರಭ ವಾರ್ತೆ ತಿಪಟೂರು

ಕ್ರಿಕೆಟ್, ಕಬಡ್ಡಿ ಹಾಗೂ ಫುಟ್‌ಬಾಲ್ ಆಟಗಳಂತೆ ಖೋ-ಖೋ ಪಂದ್ಯಾವಳಿ ದೇಶ ವಿದೇಶಗಳಲ್ಲಿಯೂ ಅತಿ ಹೆಚ್ಚು ಮಾನ್ಯತೆ ಪಡೆದುಕೊಂಡಿದೆ. ಪ್ರಧಾನಿ ಮೋದಿ ಅವರು ದೇಶೀಯ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಐಪಿಎಲ್ ಹಾಗೂ ಕಬಡ್ಡಿ ಪ್ರೀಮಿಯಂ ಲೀಗ್ ಪಂದ್ಯಾವಳಿ ಮಾದರಿಯಲ್ಲಿ ಖೋ-ಖೋ ಪಂದ್ಯಾವಳಿಯು ಒಡಿಶಾ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಆಯೋಜನೆಯಾಗಲಿದೆ ಎಂದು ರಾಷ್ಟ್ರೀಯ ಖೋ-ಖೋ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಂ.ಎಸ್. ತ್ಯಾಗಿ ತಿಳಿಸಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆಯಲಿರುವ 33ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕ ಬಾಲಕಿಯರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ತಿಪಟೂರು ತಾಲೂಕು ಕೇಂದ್ರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಾಷ್ಟ್ರ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಇಲ್ಲಿನ ಎಸಿಪಿ, ಸಮಾಜ ಸೇವಕರು ಹಾಗೂ ಸ್ವತಃ ಕ್ರೀಡಾಪಟು ಆಗಿರುವ ಲೋಕೇಶ್ವರ ನೇತೃತ್ವದಲ್ಲಿ ನಡೆಯುತ್ತಿರುವುದು ಕ್ರೀಡಾಪ್ರೇಮಿಗಳಿಗೆ ಸಂತೋಷ ತಂದಿದೆ. ಈ ಪಂದ್ಯಾವಳಿಗೆ ೬೫ಕ್ಕೂ ಹೆಚ್ಚು ಟೀಮ್‌ಗಳು ಆಗಮಿಸಿದ್ದು, ಪ್ರತಿಯೊಂದೂ ಪಂದ್ಯಾವಳಿಗಳನ್ನು ನೋಡಿ ಕಣ್‌ ತುಂಬಿಸಿಕೊಳ್ಳಲು ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ವಿವಿಧ ರಾಜ್ಯಗಳಿಂದ ನೂರಾರು ಕ್ರೀಡಾಪಟುಗಳು ಆಗಮಿಸಿರುವ ಈ ಪಂದ್ಯಾವಳಿ ಯಶಸ್ಸಿಯಾಗಿ ನಡೆಯಲಿ ಎಂದು ಶುಭಹಾರೈಸಿದರು. ಜನವರಿ ತಿಂಗಳಲ್ಲಿ ಜಾರ್ಖಂಡ್‌ನಲ್ಲಿ ಐಪಿಎಲ್ ರೀತಿಯಲ್ಲಿ ಖೋ-ಖೋ ಪಂದ್ಯಾವಳಿಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ಕಲ್ಪತರು ನಾಡು ಕೊಬ್ಬರಿಗೆ ಹೇಗೆ ವಿಶ್ವಪ್ರಸಿದ್ಧಿಯಾಗಿದೆಯೋ ಹಾಗೆಯೇ ಕ್ರೀಡಾ ಕ್ಷೇತ್ರದಲ್ಲೂ ಬಹುದೊಡ್ಡ ಸಾಧನೆ ಮಾಡಿದೆ. ಇಲ್ಲಿ ನೂರಾರು ಕ್ರೀಡಾ ಪ್ರತಿಭೆಗಳಿದ್ದು, ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಕಲ್ಪತರು ನಾಡಿಗೆ ಕೀರ್ತಿ ತಂದಿದ್ದಾರೆ. ತಿಪಟೂರು ಸ್ಪೋರ್ಟ್ಸ್ ಕ್ಲಬ್‌ನ್ನು ಪ್ರಾರಂಭಿಸುವ ಮೂಲಕ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಈ ಹಿಂದೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈಗ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾವಳಿ ನಡೆಯುತ್ತಿರುವುದು ತಿಪಟೂರಿನ ಕೀರ್ತಿಯನ್ನು ದೇಶಾದ್ಯಂತ ಮತ್ತಷ್ಟು ಹೆಚ್ಚಿಸಿದೆ. ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಭಿಮಾನಿಗಳು ಪಂದ್ಯಾವಳಿಯ ರಸದೌತಣವನ್ನು ಸವಿಯುವ ಮೂಲಕ ಯಶಸ್ವಿಗೊಳಿಸಬೇಕೆಂದರು.

ಕಾರ್ಯಕ್ರಮದಲ್ಲಿ ಕ್ರೀಡಾಧಿಕಾರಿಗಳು, ನಗರಸಭೆ ಸದಸ್ಯರು, ಕರ್ನಾಟಕ, ಹರಿಯಾಣ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ, ಗೋವಾ, ಗುಜರಾತ್, ಛತ್ತಿಸ್‌ಘಡ, ಅಸ್ಸಾಂ, ಕೇರಳ, ನಾಗ್‌ಪುರ್, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿದ್ದಾರೆ.

ಬಾಕ್ಸ್........

ಖೋಖೋ ಪದ್ಯಾಂವಳಿಗೆ ತಯಾರಿ

ಕಲ್ಪತರು ಕ್ರೀಡಾಂಗಣದಲ್ಲಿ ಐದು ಅಂಕಣಗಳನ್ನು ತಯಾರಿಸಿದ್ದು, ಎರಡು ಅಂಕಣಕ್ಕೆ ಪೆಡಲೈಟ್ ಮತ್ತು ಸಿಂಥಟಿಕ್ ಮ್ಯಾಟ್ ಅಳವಡಿಸಲಾಗಿದೆ. ನಗರ ಹಾಗೂ ಕ್ರೀಡಾಂಗಣ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ಪಂದ್ಯಾವಳಿ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಶೌಚಾಲಯ, ಪೊಲೀಸ್ ಭದ್ರತೆ, ವೈದ್ಯಕೀಯ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾಪಟುಗಳಿಗೆ ವಸತಿ, ವಿಶೇಷ ಭೋಜನ ಸೇರಿದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ರಾಷ್ಟ್ರ ಮಟ್ಟದ ಪಂದ್ಯಾವಳಿಯನ್ನು ತಾಲೂಕು ಕೇಂದ್ರದಲ್ಲಿ ಆಯೋಜಿಸಿರುವ ಲೋಕೇಶ್ವರ ಅವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು, ಕ್ರೀಡಾಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫೋಟೋ 14-ಟಿಪಿಟಿ1

ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ಮಾತನಾಡಿದ ರಾಜ್ಯ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ.

Share this article