ಪಂಚಭೂತಗಳಲ್ಲಿ ಲೀಲಾವತಿ ಲೀನ

KannadaprabhaNewsNetwork | Published : Dec 10, 2023 1:30 AM

ಸಾರಾಂಶ

ದಾಬಸ್‌ಪೇಟೆ: ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಅವರ ಅಂತ್ಯಸಂಸ್ಕಾರ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿದಂತೆ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹಿಂದು ಬಂಟ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿತು.ಅವರು ಅಪರಿಮಿತವಾಗಿ ಪ್ರೀತಿಸುತ್ತಿದ್ದ ಅವರ ತೋಟ, ಪರಿಸರ, ಗಿಡಮರಗಳ ನಡುವೆ ಮಣ್ಣಲ್ಲಿ ಮಣ್ಣಾದರು.

ದಾಬಸ್‌ಪೇಟೆ: ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಅವರ ಅಂತ್ಯಸಂಸ್ಕಾರ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿದಂತೆ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹಿಂದು ಬಂಟ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿತು.ಅವರು ಅಪರಿಮಿತವಾಗಿ ಪ್ರೀತಿಸುತ್ತಿದ್ದ ಅವರ ತೋಟ, ಪರಿಸರ, ಗಿಡಮರಗಳ ನಡುವೆ ಮಣ್ಣಲ್ಲಿ ಮಣ್ಣಾದರು.

ನೆಲಮಂಗಲ ಅಂಬೇಡ್ಕರ್ ಕ್ರೀಡಾಂಗಣದಿಂದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಿಗ್ಗೆ 10.15ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಸ್ಥಳಾಂತರಿಸಲಾಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರು, ಅಭಿಮಾನಿಗಳು, ಚಿತ್ರರಂಗ ಕಲಾವಿದರ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಮಧ್ಯಾಹ್ನ 2.45ಕ್ಕೆ ಸೋಲದೇವನಹಳ್ಳಿಗೆ ತರಲಾಯಿತು. ಅಂತಿಮ ಸಂಸ್ಕಾರ ಮಾಡುವ ಮುನ್ನ ಲೀಲಾವತಿಯವರ ಪಾರ್ಥಿವ ಶರೀರಕ್ಕೆ ಪುತ್ರ ವಿನೋದ್ ರಾಜ್‌ ಹಾಗೂ ಇತರರು ಪೂಜೆ ಸಲ್ಲಿಸಿದರು.

ಸೋಲದೇವನಹಳ್ಳಿಯ ಮನೆಯಿಂದ ಅಂತ್ಯಕ್ರಿಯೆ ಸ್ಥಳಕ್ಕೆ ಹೂವಿನ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತರಲಾಯಿತು. ಅಲ್ಲಿ ಮತ್ತೆ ವಿನೋದ್ ರಾಜ್ ಹಾಗೂ ಇತರರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ನಂತರ ಸರ್ಕಾರಿ ಗೌರವ ಸಲ್ಲಿಸಿ, ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಪುಷ್ಪನಮನ ಸಲ್ಲಿಸಿದರು. ಪೊಲೀಸ್‌ ಇಲಾಖೆ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಬಳಿಕ ಲೀಲಾವತಿ ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಸೇರಿ ಹಲವು ವಿಧಿ-ವಿಧಾನಗಳನ್ನು ಪೂರೈಸಿ ಲೀಲಾವತಿಯವರನ್ನು ಮಣ್ಣಿಗೆ ಸೇರಿಸಲಾಯಿತು.

ಬಿಗಿ ಭದ್ರತೆ:

ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ತಂಡ ಅಂಬೇಡ್ಕರ್ ಕ್ರೀಡಾಂಗಣ ಹಾಗೂ ಸೋಲದೇವನಹಳ್ಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಅನುರಾಧ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅರುಂಧತಿ, ಇಒ ಮಧು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಪೋಟೋ 8 : ತಾಯಿಯ ಪಾರ್ಥಿವ ಶರೀರ ನೋಡಿ ಭಾವುಕಾರದ ಪುತ್ರ ವಿನೋದ್ ರಾಜ್.

ಪೋಟೋ 9 : ಲೀಲಾವತಿ ಸಾಕಿದ್ದ ಶ್ವಾನ ಬ್ಲಾಕಿ ಲೀಲಾವತಿ ಅವರ ಪ್ರಾರ್ಥಿವ ಶರೀರ ವೀಕ್ಷಿಸಿತು.

ಪೋಟೋ 10 : ಲೀಲಾವತಿ ಅವರ ಅಂತಿಮ ದರ್ಶನ ಪಡೆದ ವಿದ್ಯಾರ್ಥಿಗಳು.

ಪೋಟೋ 11 : ಮಂಡ್ಯದ ಅಭಿಮಾನಿಯೊಬ್ಬರು ಎಕ್ಸ್ಎಲ್ ಬೈಕಿನಲ್ಲಿ ಪ್ರಾರ್ಥಿವ ಶರೀರ ನೋಡಲು ಬಂದಿರುವುದು

ಪೋಟೋ 12 * 13 : ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿಸಿದ ವಿನೋದ್ ರಾಜ್

ಪೋಟೋ 14 : ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವ ಜನಸ್ತೋಮ

ಪೋಟೋ 15 : ಲೀಲಾವತಿ ಅವರ ಸಮಾಧಿಗೆ ಪುತ್ರ ವಿನೋದ್ ರಾಜ್ ಪೂಜೆ ಸಲ್ಲಿಸಿದರು.

ಪೋಟೋ 17 : ಸರ್ಕಾರದ ಪರವಾಗಿ ಸಚಿವ ಮುನಿಯಪ್ಪ ಪುಷ್ಪನಮನ ಸಲ್ಲಿಸಿದರು.

Share this article