ಅಂಬೇಡ್ಕರ್‌ರನ್ನು ಜಾತಿಗೆ ಸಿಮೀತ ಮಾಡುವುದು ಸರಿಯಲ್ಲ: ಶಾಂತಿಗ್ರಾಮ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಧು

KannadaprabhaNewsNetwork | Published : Jun 27, 2024 1:10 AM

ಸಾರಾಂಶ

ಅಂಬೇಡ್ಕರ್‌ ಭಾರತ ಸಂವಿಧಾನವನ್ನು ರಚಿಸಿದ್ದಾರೆ. ಇವರನ್ನು ಒಂದು ಜಾತಿ, ಜನಾಂಗಕ್ಕೆ ಸಿಮೀತಗೊಳಿಸುವುದು ಸರಿಯಲ್ಲ. ಇವರು ಸರ್ವಜನಾಂಗದ ಮಹಾ ನಾಯಕ ಎಂದು ಶಾಂತಿಗ್ರಾಮ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಧು ತಿಳಿಸಿದರು. ಹಾಸನದಲ್ಲಿ ಅಂಬೇಡ್ಕರ್ ಯುವಕರ ಸಂಘ ನೂತನ ಸಂಘ ಹಾಗೂ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಮಫಲಕ ಉದ್ಘಾಟನೆ । ಅಂಬೇಡ್ಕರ್‌ ಯುವಕರ ಸಂಘ ಆರಂಭ

ಕನ್ನಡಪ್ರಭ ವಾರ್ತೆ ಹಾಸನ

ಸರ್ವ ಜನಾಂಗಕ್ಕೂ ಸಮಪಾಲು, ಸಮಬಾಳು ಎಂಬಂತೆ ಡಾ.ಬಿ.ಆರ್‌.ಅಂಬೇಡ್ಕರ್‌ ಭಾರತ ಸಂವಿಧಾನವನ್ನು ರಚಿಸಿದ್ದಾರೆ. ಇವರನ್ನು ಒಂದು ಜಾತಿ, ಜನಾಂಗಕ್ಕೆ ಸಿಮೀತಗೊಳಿಸುವುದು ಸರಿಯಲ್ಲ. ಇವರು ಸರ್ವಜನಾಂಗದ ಮಹಾ ನಾಯಕ ಎಂದು ಶಾಂತಿಗ್ರಾಮ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಧು ತಿಳಿಸಿದರು.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹಾಸನ ತಾಲೂಕಿನ ಶಾಂತಿ ಗ್ರಾಮದ ಮಡೆನೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ನೂತನ ಸಂಘ ಹಾಗೂ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮದಲ್ಲಿ ಅಂಬೇಡ್ಕರ್ ಅವರ ಕಾರ್ಯಕ್ರಮಗಳು ನಡೆದರೆ ಎಲ್ಲಾ ಜಾತಿ ಜನಾಂಗದವರು ಒಟ್ಟಿಗೆ ಸೇರಿ ಮಾಡಿದರೆ ಅರ್ಥಪೂರ್ಣವಾಗುತ್ತವೆ. ಕುವೆಂಪು ಅವರು ಹೇಳುವಂತೆ ಮನುಜ ಮತ ವಿಶ್ವಪಥ ಎನ್ನುವಂತೆ ಪ್ರತಿಯೊಬ್ಬರೂ ಬದುಕಬೇಕು. ಸರ್ವಜ್ಞ ಹೇಳುವಂತೆ ಎಲ್ಲರೂ ನಮ್ಮವರು ಎಂದು ಗ್ರಾಮದಲ್ಲಿ ಸರ್ವ ಜಾತಿ ಜನಾಂಗದವರು ಜೀವನ ಮಾಡುವಂತೆ ಸಲಹೆ ನೀಡಿದರು.

ದೇಶ ಕಟ್ಟುವ ಜವಾಬ್ದಾರಿ ಯುವಕರ ಮೇಲಿದ್ದು ಯುವ ಸಮುದಾಯವರು ಹಿರಿಯರ ಮಾರ್ಗದರ್ಶನ ಪಡೆದುಕೊಂಡು ದ್ವೇಷ ಕಟ್ಟಿಕೊಳ್ಳದೆ ಗ್ರಾಮದಲ್ಲಿ ಸೌಹರ್ದಯುವಾಗಿ ಜೀವಿಸುವುದು ಅಗತ್ಯವಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ಜೀವಿಗಳಿಗೆ ಹಾಗೂ ಜಾತಿ, ಜನಾಂಗಕ್ಕೆ ಸಾಮಾಜಿಕ ನ್ಯಾಯದಡಿ ಸಂವಿಧಾನ ಬರೆದಿದ್ದು ನೆಲದ ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದೆ. ಅದನ್ನು ಎಲ್ಲರೂ ಸದ್ಬಳಕ್ಕೆ ಮಾಡಿಕೊಂಡು ಉತ್ತಮ ಜೀವನ ಮಾಡಬೇಕು.ಎಲ್ಲಾ ಕಾನೂನುಗಳ ತಾಯಿ ಬೇರು ಸಂವಿಧಾನವಾಗಿದ್ದು ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಜೀವಿಸಬೇಕು ಎಂದು ತಿಳಿಸಿದರು.

ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್‌ ಮಾತನಾಡಿ, ‘ಮಡೆನೂರಿನಲ್ಲೂ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಹೋರಾಟದ ಫಲವಾಗಿ ಅವರು ದೇವಾಲಯ ಪ್ರವೇಶದ ಹಕ್ಕು ಪಡೆದುಕೊಂಡಿದ್ದಾರೆ. ಕೆರೆಯಲ್ಲಿ ನೀರು ಕುಡಿಯುವುದು, ದೇವಾಲಯ ಪ್ರವೇಶ ಮಾಡುವುದು ಸಾಮಾಜಿಕ ನ್ಯಾಯವಾಗಿದೆ. ಹಾಗಾಗಿ ದೇವಾಲಯ ಪ್ರವೇಶ ಮಾಡಿದ್ದರಿಂದ ನಾವು ಬದಲಾಗುತ್ತೇವೆ ಎಂದಲ್ಲ. ನಾವು ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬದಲಾದರೆ ಮಾತ್ರ ನಮ್ಮ ಉದ್ಧಾರ ಸಾಧ್ಯವಾಗುತ್ತದೆ. ಅಸ್ಪೃಶ್ಯತೆ ಹೋಗಲಾಡಿಸಲು ವಿದ್ಯೆಯಿಂದ ಮಾತ್ರ ಸಾಧ್ಯ ಎಂದು ಅರ್ಥಮಾಡಿಕೊಳ್ಳಬೇಕು ಎಂದರು.

ಹಿರಿಯ ಮುಖಂಡರಾದ ಎಚ್.ಕೆ.ಸಂದೇಶ್ ಅಂಬೇಡ್ಕರ್ ಅವರ ಬದುಕು, ಬವಣೆ ಹೋರಾಟದ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು.

ಬಿಎಸ್ಪಿ ರಾಜ್ಯಕಾರ್ಯದರ್ಶಿ ಶಿವಮ್ಮ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ, ಜೈ ಭೀಮ್ ಬಿಗ್ರೇಡ್ ಜಿಲ್ಲಾಧ್ಯಕ್ಷ ರಾಜೇಶ್, ದಸಂಸ ಜಿಲ್ಲಾಧ್ಯಕ್ಷ ಚೇತನ್ ಶಾಂತಿಗ್ರಾಮ, ವೈಚಾರಿಕ ಪತ್ರಿಕೆ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ, ಮಾದಿಗ ಮುಖಂಡ ಕುಮಾರಸ್ವಾಮಿ, ಮುಂಖಂಡರಾದ ಭಾಗ್ಯ ಕಲಿವೀರ, ತೋಟೇಶ್ , ವೈಚಾರಿಕ ಪತ್ರಿಕೆ ವರದಿಗಾರ ರಾಮು, ಗ್ರಾಪಂ ಸದಸ್ಯೆ ಕೋಮಲ ರಂಗಸ್ವಾಮಿ, ಪಾಂಡುರಂಗ, ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಪ್ರಶಾಂತ್, ಖಜಾಂಚಿ ನಂಜುಂಡಯ್ಯ ಹಾಗೂ ಸಂಘದ ಸರ್ವ ಸದಸ್ಯರು, ಮಹಿಳೆಯರು, ಗ್ರಾಮಸ್ಥದ ಮುಖಂಡರು ಹಾಜರಿದ್ದರು.

ಗ್ರಾಮಮದಲ್ಲಿ ಹಬ್ಬದ ವಾತಾವರಣ:

ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಮಡೆನೂರಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಅನಾವರಣ ಹಾಗೂ ನೂತನ ಸಂಘ ಉದ್ಘಾಟನೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಜೈ ಭೀಮ್‌, ಅಂಬೇಡ್ಕರ್ ಜಿಂದಾಬಾದ್ ಹೀಗೆ ಅನೇಕ ಅಂಬೇಡ್ಕರ್ ಘೋಷಣೆಗಳೊಂದಿಗೆ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಗ್ರಾಮದಲ್ಲಿ ಅಂಬೇಡ್ಕರ್ ಹಬ್ಬದ ವಾತಾವರಣ ಕಂಡು ಬಂದಿತು. ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು.

Share this article