ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನದಿಂದ ಏರಿಕೆಯಾಗುತ್ತಿದ್ದು, ಈಗಾಲೇ 1801 ಅಡಿಗೆ ತಲುಪಿದೆ. ಬುಧವಾರ 60 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ ಜಲಾಶಯದ ಗರಿಷ್ಠ ಮಟ್ಟ ತಲುಪು ಸಾಧ್ಯತೆ ಇರುವುದರಿಂದ ಅಣೆಕಟ್ಟು ಸುರಕ್ಷತೆ ದೃಷ್ಠಿಯಿಂದ ಹೆಚ್ಚು ವರಿ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಹೀಗಾಗಿ ಅಣೆಕಟ್ಟು ಕೆಳದಂಡೆಯಲ್ಲಿ ಹಾಗೂ ನದಿಪಾತ್ರದ ವಾಸಿಗಳು ಸಾರ್ವಜನಿಕರು ತಮ್ಮ ಜಾನುವಾರು, ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 36 ಮಿ.ಮೀ ಮಳೆ ಸುದ್ದಿದ್ದು, ಶಿವಮೊಗ್ಗದಲ್ಲಿ 18.90 ಮಿ.ಮೀ, ಭದ್ರಾವತಿ 10.20 ಮಿ.ಮೀ, ತೀರ್ಥಹಳ್ಳಿ 60.90 ಮಿ.ಮೀ, ಸಾಗರದಲ್ಲಿ 58.90 ಮಿ.ಮೀ, ಶಿಕಾರಿಪುರ 10.40 ಮಿ.ಮೀ, ಸೊರಬದಲ್ಲಿ 23.90 ಮಿ.ಮೀ, ಹೊಸನಗರದಲ್ಲಿ 68.80 ಮಿ.ಮೀ ಮಳೆಯಾಗಿದೆ.ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜಲಾಶಯಗಳಲ್ಲೂ ಒಳ ಹರಿವಿನ ಪ್ರಮಾಣ ತಗ್ಗಿದೆ. ತುಂಗಾ ಜಲಾಶಯಕ್ಕೆ ಬುಧವಾರ 34542 ಕ್ಯುಸೆಕ್ ನೀರು ಹರಿದು ಬಂದರೆ, ಭದ್ರಾ ಜಲಾಶಯಕ್ಕೆ ಬುಧವಾರ 15383 ಕ್ಯುಸೆಕ್ ನೀರು ಹರಿದು ಬಂದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 169.5 ಕ್ಕೆ ಏರಿಕೆಯಾಗಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 52.27 ಟಿಎಂಸಿ ನೀರು ಸಂಗ್ರಹವಾಗಿದೆ.
ಇನ್ನು, ಲಿಂಗನಮಕ್ಕಿ ಜಲಾಶಯದಲ್ಲಿ ಒಳ ಹರಿವು ಪ್ರಮಾಣ ಹೆಚ್ಚಾಗಿದ್ದು, ಮಂಗಳವಾರ 41269 ಕ್ಯುಸೆಕ್ ಇದ್ದ ಒಳ ಹರಿವಿನ ಪ್ರಮಾಣ ಬುಧವಾರ 58619 ಕ್ಯುಸೆಕ್‌ಗೆ ಏರಿಕೆಯಾಗಿದೆ.151 ಟಿಎಂಸಿ ನೀರಿನ ಸಂಗ್ರಹದ ಪೈಕಿ 98.40 ಟಿಎಂಸಿ ನೀರು ಸಂಗ್ರಹವಾಗಿದೆ. ನೀರಿನ ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 1801ಅಡಿಗೆ ಏರಿಕೆಯಾಗಿದೆ.ಮಳೆ ಅವಾಂತರ, ಮನೆಗಳು ಧರಾಶಾಯಿ:
ಹೊಳೆಹೊನ್ನೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸತತವಾಗಿ ಹಳ್ಳಿಗಳಲ್ಲಿ ಮನೆಗಳು ಕುಸಿದು ಬೀಳುತ್ತಿರುವುದು ಸಾಮಾನ್ಯವಾಗಿದೆ.ಸಮೀಪದ ಅರಹತೊಳಲು ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಗೆ ಸುಮಾರು 45 ವರ್ಷಗಳಷ್ಟು ಹಳೆಯದಾದ ಮತ್ತು ಗಟ್ಟಿಮುಟ್ಟಾಗಿದ್ದ ಮನೆಯೊಂದು ನೆಲಕ್ಕುರುಳಿದೆ.
ರಾಜಮ್ಮ ಕೋಂ ಪರಮೇಶ್ವರಪ್ಪ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಕಳೆದ ಹತ್ತು ಹದಿನೈದು ದಿನಗಳಿಂದ ಮಳೆ ಬಿಡುವಿಲ್ಲದೆ ಬರುತ್ತಿದೆ. ಇದರಿಂದ ಭೂಮಿ ಯಲ್ಲಿ ತೇವ ಹೆಚ್ಚಾಗಿ ನೆಲ ಕುಸಿಯುತ್ತಿರುವುದರಿಂದ ಮನೆಗಳು ಬೀಳಲು ಪ್ರಾರಂಭಿಸಿವೆ. ವಿಷಯ ತಿಯುತ್ತಿದ್ದಂತೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗಾಳಿ ಮಳೆಗೆ ಕುಸಿದು ಬಿದ್ದ ಮನೆರಿಪ್ಪನ್ಪೇಟೆ: ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪದ ಕೆಂದಾಳದಿಂಬದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ.
ಭಾರಿ ಗಾಳಿ ಮಳೆಯಿಂದಾಗಿ ಇಡೀ ಮನೆ ಕುಸಿದು ಬಿದ್ದಿದ್ದು ಮನೆಯಲ್ಲಿ ವಾಸಿಸುತ್ತಿದ್ದ ಅಮರ್‌ಸಿಂಗ್ ಕುಟುಂಬ ವರ್ಗ ದವರು ಅದೃಷ್ಟವಶಾತ್ ಪ್ರಾಣಾಪಾಯ ದಿಂದ ಪಾರಾಗಿದ್ದು ವಾಸದ ಮನೆ ಸಂಪೂರ್ಣವಾಗಿ ನಲಸಮಗೊಂಡು ಅಪಾರ ನಷ್ಟ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಬಾಳೂರು ಗ್ರಾಮ ಪಂಚಾಯ್ತಿ ಪಿಡಿಓ ಭರತ್ ಗ್ರಾಮ ಲೆಕ್ಕಾಧಿಕಾರಿ ಅಂಬಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ಪರಿಹಾರಕ್ಕೆ ಭರವಸೆ ನೀಡಿದ್ದಾರೆ.