ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವೀರಶೈವ ಲಿಂಗಾಯತ ಸಮುದಾಯದ ಮೇಲೆ ರಾಜ್ಯದಲ್ಲಿ ಬಿಜೆಪಿ ಉಸಿರಾಡುತ್ತಿದೆ. ಈ ಸಮುದಾಯದ ಸಂಸದರಿಗೆ ಕ್ಯಾಬಿನೆಟ್ ದರ್ಜೆ ಖಾತೆ ನೀಡದೇ, ಕವಡೆ ಕಾಸು ಕಿಮ್ಮತ್ತು ಇಲ್ಲದ ರಾಜ್ಯ ದರ್ಜೆ ಮಂತ್ರಿ ಸ್ಥಾನ ನೀಡುವ ಮೂಲಕ ಇಡೀ ಲಿಂಗಾಯತ ವರ್ಗವನ್ನೇ ಅವಮಾನಕಾರವಾಗಿ ನಡೆಸಿಕೊಂಡಿದೆ. ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ನೆರಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದ ಬಿಜೆಪಿ ಈಗ ಅದಕ್ಕಿಂತೂ ಹೆಚ್ಚು ಅಪಮಾನ ಮಾಡುವ ರೀತಿ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ನಡೆದುಕೊಂಡಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಕ್ಕೆ ಚುನಾವಣೆ ಸಂದರ್ಭದಲ್ಲಿ ಅಧಿಕಾರದ ಆಸೆ ತೋರಿಸಿ ಮತ ಪಡೆದು ಗದ್ದುಗೆ ಏರಿದ ಬಳಿಕ ಅತ್ಯಂತ ನಿಕೃಷ್ಟವಾಗಿ ಈ ಸಮುದಾಯಗಳನ್ನು ಬಿಜೆಪಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಸಂಪುಟದಲ್ಲಿ ಆಗಿರುವ ಅನ್ಯಾಯವೇ ಸ್ಪಷ್ಟ ಉದಾಹರಣೆ ಎಂದಿದ್ದಾರೆ.
ರಾಜ್ಯದಲ್ಲಿ ಮಾದಿಗ, ಭೋವಿ, ನಾಯಕ ಹಾಗೂ ಒಬಿಸಿ ವರ್ಗದ ಅನೇಕರು ಎನ್‌ಡಿಎ ಒಕ್ಕೂಟದಡಿ ಗೆದ್ದಿದ್ದಾರೆ. ಆದರೆ, ಇವರ್ಯಾರಿಗೂ ಮಂತ್ರಿ ಸ್ಥಾನ ನೀಡದೇ ನೀವುಗಳು ನಮ್ಮ ಕಾಲಾಳುಗಳು. ಮತ ಹಾಕಲಷ್ಟೇ ನೀವು ನಮಗೆ ಬೇಕು, ಅಧಿಕಾರ ಬಂದ ಬಳಿಕ ನೀವು ಬೇಕಿಲ್ಲ ಎಂಬುದನ್ನು ಬಿಜೆಪಿ ಸ್ಪಷ್ಟವಾಗಿ ತನ್ನ ವರ್ತನೆ ಮೂಲಕ ತೋರ್ಪಡಿಸಿದೆ ಎಂದು ದೂರಿದ್ದಾರೆ.ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮುದಾಯಕ್ಕೆ ಒಂದು ಟಿಕೆಟ್ ನೀಡಲಿಲ್ಲ. ಇದನ್ನು ಪ್ರಶ್ನಿಸಿದ ಪಕ್ಷದ ಕಟ್ಟಾಳು ಕೆ.ಎಸ್.ಈಶ್ವರಪ್ಪರನ್ನೇ ಉಚ್ಚಾಟಿಸಿ, ಹಿಂದುಳಿದ ಹಿರಿಯಣ್ಣನ ಸ್ಥಾನದಲ್ಲಿರುವ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದೆ. ಜೊತೆಗೆ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ರಾಜಕಾರಣ ಮಾಡುವ ವ್ಯಕ್ತಿಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ತಾನು ಲಿಂಗಾಯತ ವರ್ಗದ ವಿರೋಧಿ ಎಂಬುದನ್ನು ಸಚಿವ ಸಂಪುಟ ರಚನೆ ವೇಳೆ ಸ್ಪಷ್ಟವಾಗಿ ಬಿಜೆಪಿ ಹೇಳಿದೆ ಎಂದಿದ್ದಾರೆ.
ಮಧ್ಯಕರ್ನಾಟಕದ ಬಯಲು ಸೀಮೆ ಪ್ರದೇಶಕ್ಕೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅಸಹಕಾರ ತೋರಿಸುವ ಮೂಲಕ ತೀವ್ರ ಅನ್ಯಾಯ ಮಾಡಿದೆ. ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದ ₹5300 ಕೋಟಿ ಹಣದಲ್ಲಿ ಒಂದು ರುಪಾಯಿ ಬಿಡುಗಡೆ ಮಾಡದೇ ಅನ್ಯಾಯ ಮಾಡಲಾಯಿತು. ಬಿಜೆಪಿಯ 25 ಸಂಸದರು ಖಂಡಿಸದೆ ಮೌನವಹಿಸಿ ತಮ್ಮನ್ನು ಗೆಲ್ಲಿಸಿದ ಕನ್ನಡಿಗರಿಗೆ ಅನ್ಯಾಯ ಮಾಡಿದ್ದರು. ಈಗಲೂ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದರೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.