ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ: ಸಚಿವ ಕೆ.ಎನ್. ರಾಜಣ್ಣ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ ಮಾಡಲಾಗವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಹಾಸನದಲ್ಲಿ ಮಾತನಾಡಿದರು.

ಸಂಸದ ಅನಂತ ಕುಮಾರ್‌ ಹೆಗಡೆ ಕ್ಷಮೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಹಾಸನ

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ ಮಾಡಲಾಗವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಏಕವಚನದಲ್ಲಿ ಮಾತನಾಡಿರುವ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ‘ಅತೀ ಶೀಘ್ರದಲ್ಲೇ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಾರೆ. ನಾಳೆ ರಾಜ್ಯಸಭಾ ಚುನಾವಣೆಗೆ ಎಲ್ಲಾ ಶಾಸಕರು ಮತದಾನ ಮಾಡಲು ಮನವರಿಕೆ ಮಾಡುತ್ತಾರೆ. ಅವರೆನ್ನೆಲ್ಲಾ ಒಟ್ಟಾಗಿ ಇಡಬೇಕು, ಮೂರು ಜನಕ್ಕೂ ಮತಗಳನ್ನು ಹಂಚಿಕೆ ಮಾಡಬೇಕು. ಇವತ್ತು ಸಂಜೆ ಬಂದು ಆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ೨೭ರ ಚುನಾವಣೆ ಮಧ್ಯಾಹ್ನದ ವೇಳೆಗೆ ಮುಗಿಯುತ್ತದೆ. ಚುನಾವಣೆ ಮುಗಿದ ನಂತರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ಬಂದರೆ ಇಡೀ ದೇಶದಲ್ಲಿ ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅವರೇ ಬಿ ಫಾರಂ ಕೊಡುತ್ತಾರೆ. ಸ್ಪರ್ಧೆ ಮಾಡೋದು ಅವರಿಗೆ ಬಿಟ್ಟ ವಿಚಾರ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಿದರೆ ಸ್ವಾಗತ ಇದೆ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಅಡ್ಡ ಮತದಾನ ನಮ್ಮ ಕಡೆಯಿಂದ ಆ ಕಡೆ ಹೋಗಲ್ಲ. ಆ ಕಡೆಯಿಂದ ನಮ್ಮ ಕಡೆ ಬರಲಿವೆ. ಅಡ್ಡ ಮತದಾನ ಯಾವತ್ತೂ ಅಧಿಕಾರ ಇರುವ ಕಡೆಯಿಂದ ಅಧಿಕಾರ ಇಲ್ಲದ ಕಡೆ ಹೋಗಲ್ಲ. ಅಧಿಕಾರ ಇಲ್ಲದ ಕಡೆಯಿಂದ ಇರುವ ಕಡೆಗೆ ಬರುತ್ತವೆ. ಯಾವುದೇ ಕಾರಣಕ್ಕೂ ನಮಗೆ ಆತಂಕ ಇಲ್ಲ, ಇನ್ನೂ ಹೆಚ್ಚು ಮತಗಳು ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಮುಖ್ಯಮಂತ್ರಿ ಆಗಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಮಾತನಾಡಿ, ‘ರಾಜಕಾರಣದಲ್ಲಿ ಕಾಂಗ್ರೆಸ್ ಇಪ್ಪತ್ತೈದು ವರ್ಷ ಇರುತ್ತದೆ ಎಂದು ಅವರು ಹೇಳಲು ಆಗುತ್ತದೆಯೇ? ನಾವು ನಿರೀಕ್ಷೆ ಮಾಡಲು ಆಗುತ್ತಾ! ನಾವು ನಿರೀಕ್ಷೆ ಮಾಡುವ ಹಾಗಿಲ್ಲ. ಅವರು ಹಾಗೇ ಹೇಳುತ್ತಾರೆ. ನಾವು ಇನ್ನೂ ಇಪ್ಪತ್ತೈದು ವರ್ಷ ಇರ್ತೀವಿ ಎನ್ನುವ ವಿಶ್ವಾಸ ನಮಗಿದೆ’ ಎಂದು ಹೇಳಿದರು.

ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಪದ ಬಳಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಅನಂತ್ ಕುಮಾರ್ ಹೆಗಡೆ ಮನುಷ್ಯನೇ ಅಲ್ಲ. ಅವರು ಒಬ್ಬ ಸಚಿವರಾಗಿದ್ದವರು, ನಾವು ಸಂವಿಧಾನ ಬದಲಾಯಿಸುತ್ತೇವೆ. ಜನ ಅದಕ್ಕೆ ನಮಗೆ ಓಟು ಹಾಕಿರೋದು ಅಂತ ಹೇಳ್ತಾರಲ್ಲ, ಅವರ ತಲೆಯಲ್ಲಿ ಬುದ್ಧಿ ಇದೆಯಾ’ ಎಂದು ಅನಂತ್ ಕುಮಾರ್ ವಿರುಧ್ದ ಕಿಡಿಕಾರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡ ಬಾಗೂರು ಮಂಜೇಗೌಡ, ಯೂತ್ ಕಾಂಗ್ರೆಸ್ ವಿನಯ್ ಗಾಂಧಿ ಇದ್ದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾನರಿ ಸಚಿವ ಕೆ.ಎನ್.ರಾಜಣ್ಣ.

Share this article